ಸಿಎಂ ಅರ್ಜಿ ವಜಾಗೊಳಿಸಿದ ಹೈಕೋರ್ಟ್ : ಸಿದ್ದರಾಮಯ್ಯ ಮುಂದಿರುವ ಆಯ್ಕೆಗಳೇನು?
ಸಿದ್ದರಾಮಯ್ಯ
ಬೆಂಗಳೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ನೀಡಿದ್ದ ಪ್ರಾಸಿಕ್ಯೂಷನ್ ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿಯನ್ನು ಮಂಗಳವಾರ ಹೈಕೋರ್ಟ್ ವಜಾಗೊಳಿಸಿದೆ. ಆ ಮೂಲಕ ರಾಜ್ಯಪಾಲರ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದೆ.
ಹೈಕೋರ್ಟ್ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠ ತೀರ್ಪು ನೀಡಿದ್ದು, ಮುಡಾ ವಿಚಾರದಲ್ಲಿ ರಾಜ್ಯಪಾಲರ ನಿರ್ಧಾರ ಸೂಕ್ತವಾಗಿದೆ ಎಂಬ ಅಭಿಪ್ರಾಯಕ್ಕೆ ಹೈಕೋರ್ಟ್ ಬಂದಿದೆ.
ಪ್ರಾಸಿಕ್ಯೂಷನ್ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾಗೊಂಡ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಮುಂದಿರುವ ಆಯ್ಕೆಗಳೇನು ಎಂಬ ಚರ್ಚೆ ಶುರುವಾಗಿದೆ. ಮುಂದಿನ ಕಾನೂನು ಪ್ರಕ್ರಿಯೆ ಏನಿರಲಿದೆ? ಸಿದ್ದರಾಮಯ್ಯ ವಿರುದ್ಧದ ದೂರಿನ ವಿಚಾರಣೆ ಯಾವ ರೀತಿ ಸಾಗಲಿದೆ ಎಂಬ ಕುತೂಹಲ ಮೂಡಿದೆ.
ಹೈಕೋರ್ಟ್ ಏಕಸದಸ್ಯ ಪೀಠ ರಾಜ್ಯಪಾಲ ಆದೇಶ ಎತ್ತಹಿಡಿದಿದೆ. ಹೀಗಾಗಿ ಸಿಎಂ ಪರ ವಕೀಲರು ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ಇಂದೇ ಮೇಲ್ಮನವಿ ಸಲ್ಲಿಸಬಹುದು.
ಮಧ್ಯಾಹ್ನ 2:30ಕ್ಕೆ ಹೈಕೋರ್ಟ್ ಏಕಸದಸ್ಯ ಪೀಠದ ಆದೇಶದ ಪ್ರತಿ ಸಿಕ್ಕ ಬೆನ್ನಲ್ಲೇ ಅಧ್ಯಯನ ನಡೆಸಿ ಅರ್ಜಿ ಸಿದ್ದಪಡಿಸಿ ಸಿಎಂ ಸಿದ್ದರಾಮಯ್ಯ ಪರ ವಕೀಲರು ವಿಭಾಗೀಯ ಪೀಠದಲ್ಲಿ ಇಂದೇ ತುರ್ತು ವಿಚಾರಣೆಗೆ ಮನವಿ ಮಾಡಬಹುದು.
ಅದರಲ್ಲಿ ಏಕಸದಸ್ಯ ಪೀಠದ ಆದೇಶಕ್ಕೆ ಮಧ್ಯಂತರ ತಡೆಗೆ ಸಿಎಂ ಪರ ವಕೀಲರು ಮನವಿ ಮಾಡಬಹುದು.
ಅಥವಾ ಸುಪ್ರೀಂಕೋರ್ಟ್ ಮೇಲ್ಮನವಿ ಸಲ್ಲಿಸಬಹುದು. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶ ನೋಡಿಕೊಂಡು ಮತ್ತೆ ಹೈಕೋರ್ಟ್ ಅರ್ಜಿ ಸಲ್ಲಿಸಲೂ ಕೂಡ ಅವಕಾಶ ಇದೆ.