ಒಕ್ಕಲಿಗರ ಸಂಘದಲ್ಲಿ ಯಾವುದೇ ಸಭೆ ನಡೆಸದಂತೆ ಹೈಕೋರ್ಟ್ ಸೂಚನೆ
ಬೆಂಗಳೂರು, ಜು.8: ಜುಲೈ 17ರ ವರೆಗೆ ಒಕ್ಕಲಿಗರ ಸಂಘದಲ್ಲಿ ಸಭೆ ನಡೆಸುವುದು ಹಾಗೂ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳದಂತೆ ಹೈಕೋರ್ಟ್ ಸೂಚನೆ ನೀಡಿದೆ.
ಸಂಘದ ಸದಸ್ಯರಾದ ಹಾಸನ ಜಿಲ್ಲೆಯ ಸಂಕ್ಲಾಪುರದ ಎಸ್.ಎಸ್.ರಘುಗೌಡ ಸೇರಿದಂತೆ ನಾಲ್ವರು ಸದಸ್ಯರು ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ, ಈ ಆದೇಶ ನೀಡಿದೆ.
ವಿಚಾರಣೆ ವೇಳೆ ಪ್ರತಿವಾದಿಗಳಲ್ಲಿ ಒಬ್ಬರಾಗಿರುವ ಕೆಂಚಪ್ಪಗೌಡರ ಪರ ವಕೀಲರು, ಸಂಘದ ಸಭೆ ನಡೆಸುವುದಕ್ಕೆ ಸಂಬಂಧಿಸಿದಂತೆ ಎರಡೂ ಬಣಗಳು ಯಾವುದೇ ನಿರ್ಧಾರ ತೆಗೆದುಕೊಳ್ಳದಂತೆ ನಿರ್ದೇಶನ ನೀಡಬೇಕು. ಇಲ್ಲವಾದಲ್ಲಿ ರೆಸಾರ್ಟ್ ರಾಜಕಾರಣಕ್ಕೆ ದಾರಿ ಮಾಡಿಕೊಡಲಿದೆ ಎಂದು ನ್ಯಾಯಪೀಠಕ್ಕೆ ಕೋರಿದರು.
ಇದನ್ನು ಪರಿಗಣಿಸಿದ ಪೀಠ, ಬಾಲಕೃಷ್ಣ ನೇತೃತ್ವದ ಗುಂಪು ಜು.17ರ ವರೆಗೆ ಯಾವುದೇ ನಿರ್ಧಾರ ತೆಗೆದುಕೊಳ್ಳಬಾರದು. ಹೈಕೋರ್ಟ್ ಮೆಟ್ಟಿಲೇರಿದ ಸದಸ್ಯರನ್ನು ಹೊರತು ಪಡಿಸಿ ಉಳಿದ ಸದಸ್ಯರಿಗೆ ಪೂರ್ವ ನೋಟಿಸ್ ನೀಡಿ ಅವಿಶ್ವಾಸ ನಿರ್ಣಯ ಮಂಡಿಸುವಂತೆ ನಿರ್ದೆಶನ ನೀಡಿ ವಿಚಾರಣೆಯನ್ನು ಮುಂದೂಡಿತು.
ಒಕ್ಕಲಿಗರ ಸಂಘದ ಕುರಿತು ಪ್ರತಿಕ್ರಿಯಿಸಿರುವ ಪೀಠ, ದೇಶದ ವ್ಯವಸ್ಥೆ ಕೆಟ್ಟು ಹೋಗಿದ್ದು, ಎಲ್ಲೆಡೆ ಕುದುರೆ ವ್ಯಾಪಾರ ನಡೆಯುತ್ತಿದೆ. ಇದನ್ನೆಲ್ಲಾ ಹೇಳಲು ನನಗೆ ನಾಚಿಕೆಯಾಗುತ್ತಿದೆ. ಸಂಘದಲ್ಲಿ ಮೆಡಿಕಲ್ ಸೀಟುಗಳನ್ನು ಅನಿವಾಸಿ ಭಾರತೀಯರಿಗೆ ಕೋಟಿಗಟ್ಟಲೇ ರೂಪಾಯಿಗಳಿಗೆ ಮಾರಿಕೊಳ್ಳಲಾಗುತ್ತಿದೆ. ಇದಕ್ಕಾಗಿಯೇ ಈ ಕುಸ್ತಿ ನಡೆಯುತ್ತಿದೆ. ಈ ಸಂಘದ ಮೂಲ ಉದ್ದೇಶಗಳೇ ಇಂದು ಮರೆಯಾಗಿವೆ. ಸಂಘದ ಸದಸ್ಯರ ಆತ್ಮಾವಲೋಕನಕ್ಕೆ ಇದು ಸಕಾಲವಾಗಿದೆ ಎಂದಿತು.
ಪ್ರಕರಣವೇನು?: ಸಂಘದ ನಿಕಟಪೂರ್ವ ಅಧ್ಯಕ್ಷ ಸಿ.ಎನ್.ಬಾಲಕೃಷ್ಣ ಮತ್ತು ಕಾರ್ಯದರ್ಶಿ ಕೋನಪ್ಪ ರೆಡ್ಡಿ ನೇತೃತ್ವದ ಕಾರ್ಯಕಾರಿ ಸಮಿತಿಯ ವಿರುದ್ಧ ಬಿ.ಕೆಂಚಪ್ಪಗೌಡರ ಗುಂಪು 2023ರ ಮೇ 29 ರಂದು ಅವಿಶ್ವಾಸ ಗೊತ್ತುವಳಿ ಮಂಡಿಸಿತ್ತು. ಈ ಗೊತ್ತುವಳಿಯನ್ನು ಬಾಲಕೃಷ್ಣ ನೇತೃತ್ವದ ಸಮಿತಿ ಬಲವಾಗಿ ವಿರೋಧಿಸಿ, ಯಾರಿಗೂ ಪೂರ್ವ ನೋಟಿಸ್ ನೀಡದೆ ಕಾನೂನುಬಾಹಿರವಾಗಿ ಸಭೆ ಕರೆಯಲಾಗಿದೆ ಎಂದು ಆಕ್ಷೇಪಿಸಿತ್ತು. ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿಲಾಗಿತ್ತು. ಈ ನೂತನ ಸಮಿತಿ 2023ರ ಜುಲೈ 5 ರಂದು ಕಾರ್ಯಕಾರಿ ಸಮಿತಿಯ ಸಭೆಯನ್ನು ಕರೆದಿತ್ತು. ಈ ಸಭೆಗೆ ಎಸ್.ಆರ್.ಕೃಷ್ಣಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಧ್ಯಂತರ ತಡೆ ನೀಡಿತ್ತು.