ʼಗ್ಯಾರಂಟಿʼ ಅನುಷ್ಠಾನ ಸಮಿತಿಗಳ ಮುಖ್ಯಸ್ಥರಿಗೆ ಸಂಪುಟ ದರ್ಜೆ ಸ್ಥಾನಮಾನ ಪ್ರಶ್ನಿಸಿ ಅರ್ಜಿ : ಸರಕಾರಕ್ಕೆ ಹೈಕೋರ್ಟ್ ನೋಟಿಸ್

ಬೆಂಗಳೂರು: ಗ್ಯಾರಂಟಿ ಯೋಜನೆ ಅನುಷ್ಠಾನಕ್ಕೆ ಸಮಿತಿ ರಚನೆ ಮತ್ತು ಸಮಿತಿಗಳ ಮುಖ್ಯಸ್ಥರಿಗೆ ಸಂಪುಟ ದರ್ಜೆ ಸ್ಥಾನಮಾನ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ಸಂಬಂಧಿಸಿದಂತೆ ರಾಜ್ಯ ಸರಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ಕಾಂಗ್ರೆಸ್‌ನ ಎಚ್.ಎಂ.ರೇವಣ್ಣ, ಎಸ್.ಆರ್.ಪಾಟೀಲ್ ಬ್ಯಾಡಗಿ, ಡಾ.ಪುಷ್ಪ ಅಮರನಾಥ್, ಮೆಹರೋಝ್ ಖಾನ್, ಸೂರಜ್ ಹೆಗ್ಡೆ ಅವರ ನೇಮಕ ಪ್ರಶ್ನಿಸಿ ಪಿ.ರಾಜೀವ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ವಿಚಾರಣೆ ನಡೆಸಿತು.
ಈ ವೇಳೆ ಅರ್ಜಿದಾರರ ಪರ ಹಿರಿಯ ವಕೀಲ ಅರುಣ್ ಶ್ಯಾಮ್ ವಾದ ಮಂಡಿಸಿ, ಕಾಂಗ್ರೆಸ್ ಪಕ್ಷದ ನಾಯಕರಿಗೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ನೀಡಲಾಗಿದೆ. ಸಂವಿಧಾನದ ಆರ್ಟಿಕಲ್ 164 (1A) ಉಲ್ಲಂಘಿಸಿ ನೇಮಕ ಮಾಡಲಾಗಿದೆ. ಯಾವುದೇ ಶೈಕ್ಷಣಿಕ, ತಾಂತ್ರಿಕ ಅರ್ಹತೆ ಪರಿಗಣಿಸದೇ ನೇಮಕ ಮಾಡಲಾಗಿದೆ ಎಂದು ಆರೋಪಿಸಿದರು.
ಈ ವೇಳೆ ಪ್ರತಿಕ್ರಿಯಿಸಿದ ಪೀಠ, ಈ ಆರೋಪ ಸತ್ಯವಾದರೆ ಸರಕಾರದ ಕ್ರಮ ಸ್ವಾಗತಾರ್ಹವಲ್ಲ ಎಂದು ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತು. ಇದೇ ವೇಳೆ ರಾಜ್ಯ ಸರಕಾರಕ್ಕೆ ಹೈಕೋರ್ಟ್ ವಿಭಾಗೀಯ ಪೀಠ ನೋಟಿಸ್ ಜಾರಿಗೊಳಿಸಿ, ಮಾರ್ಚ್ 27ಕ್ಕೆ ವಿಚಾರಣೆ ಮುಂದೂಡಿದೆ.