ರೈಲು ಪ್ರಯಾಣದ ವೇಳೆ ಮೃತಪಟ್ಟ ಪ್ರಯಾಣಿಕರಿಗೆ ಸಬೂಬು ನೀಡದೇ ಪರಿಹಾರ ಪಾವತಿಸಿ ; ರೈಲ್ವೆ ಇಲಾಖೆಗೆ ಹೈಕೋರ್ಟ್ ಆದೇಶ
ಬೆಂಗಳೂರು : "ಟಿಕೆಟ್ ಖರೀದಿಸಿದ ನಿಲ್ದಾಣವನ್ನು ಮೀರಿ ಪ್ರಯಾಣಿಸಿದ ಸಂದರ್ಭದಲ್ಲಿ ಪ್ರಯಾಣಿಕರು ಕಾರಣಾಂತರಗಳಿಂದ ಮೃತಪಟ್ಟಲ್ಲಿ ರೈಲ್ವೆ ಇಲಾಖೆ ಪರಿಹಾರ ಪಾವತಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ" ಎಂದು ಹೈಕೋರ್ಟ್ ಹೇಳಿದೆ.
ಪ್ರಯಾಣಿಕ ಇಳಿಯಬೇಕಾದ ನಿಲ್ದಾಣದ 5 ಕಿಲೋ ಮೀಟರ್ ದೂರದಲ್ಲಿ ಪ್ರಯಾಣಿಕ ಮೃತಪಟ್ಟಿದ್ದ ಹಿನ್ನೆಲೆಯಲ್ಲಿ 4 ಲಕ್ಷ ರೂ.ಪರಿಹಾರ ನೀಡುವಂತೆ ಸೂಚನೆ ನೀಡಿದ್ದ ರೈಲ್ವೆ ನ್ಯಾಯಾಧೀಕರಣದ ಕ್ರಮ ಪ್ರಶ್ನಿಸಿ ನೈರುತ್ಯ ರೈಲ್ವೆ ವ್ಯವಸ್ಥಾಪಕ ನಿರ್ದೇಶಕರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್.ಪಿ.ಸಂದೇಶ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ಅಲ್ಲದೆ, ಸುಪ್ರೀಂ ಕೋರ್ಟ್‌ನ ತೀರ್ಪುಗಳನ್ನು ಉಲ್ಲೇಖಿಸಿರುವ ನ್ಯಾಯಪೀಠ, ಟಿಕೆಟ್ ಖರೀದಿಸಿದ ನಿಲ್ದಾಣವನ್ನು ಮೀರಿ ಪ್ರಯಾಣ ಮಾಡಿದ ಪ್ರಯಾಣಿಕನನ್ನು ಅನಧಿಕೃತ ಮತ್ತು ಟಿಕೆಟ್ ರಹಿತ ಪ್ರಯಾಣಿಕ ಎಂದು ಪರಿಗಣಿಸಲಾಗುವುದಿಲ್ಲ. ಮೃತರು ರೈಲಿನಿಂದ ಕೆಳಗಿಳಿಯುವ ಸಂದರ್ಭದಲ್ಲಿ ಬಿದ್ದು ಗಾಯಗಳಾಗಿವೆ ಎಂಬುದಕ್ಕೆ ಸಾಕ್ಷಿಗಳು ಮತ್ತು ಮರಣೋತ್ತರ ವರದಿಯಲ್ಲಿ ಗೊತ್ತಾಗಿ ದೆ. ಸುಪ್ರೀಂ ಕೋರ್ಟ್ ಪ್ರಕರಣವೊಂದರಲ್ಲಿ ಒಂದು ಮಾರ್ಗದ ಟಿಕೆಟ್ ಪಡೆದು ಮತ್ತೊಂದು ಮಾರ್ಗದಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ಮೃತಪಟ್ಟಿದ್ದರೂ ಪರಿಹಾರ ತಿರಸ್ಕರಿಸಲಾಗುವುದಿಲ್ಲ ಎಂದು ಹೇಳಿದೆ. ಆದ್ದರಿಂದ ಈ ಪ್ರಕರಣದಲ್ಲಿ ಮೃತರು ಟಿಕೆಟ್ ಖರೀದಿಸಿದ ನಿಲ್ದಾಣವನ್ನು ಮೀರಿ ಪ್ರಯಾಣ ಬೆಳೆಸಿದ್ದರೂ ಪರಿಹಾರ ನೀಡುವಂತೆ ನ್ಯಾಯಾಧೀಕರಣದ ಆದೇಶದಲ್ಲಿ ಯಾವುದೇ ಲೋಪವಿಲ್ಲ ಎಂದು ಅಭಿಪ್ರಾಯಪಟ್ಟು, ರೈಲ್ವೆ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿತು.
ಮೃತ ಪ್ರಯಾಣಿಕ 2009ರ ಫೆಬ್ರವರಿ 14ರಂದು ಬೆಂಗಳೂರಿನ ವೈಟ್ ಫೀಲ್ಡ್ ರೈಲು ನಿಲ್ದಾಣದಿಂದ ಕುಪ್ಪಂ ನಿಲ್ದಾಣಕ್ಕೆ ಪ್ರಯಾಣಿಸಲು ಟಿಕೆಟ್ ಖರೀದಿಸಿ, ಮೈಸೂರು-ತಿರುಪತಿ ಪ್ಯಾಸೆಂಜರ್ ರೈಲಿನಲ್ಲಿ ಪ್ರಯಾಣಿಸಿದ್ದರು.
ರೈಲಿನ ಬೋಗಿಯಲ್ಲಿ ಹೆಚ್ಚಿನ ಜನರಿದ್ದ ಪರಿಣಾಮ ಕುಪ್ಪಂ ನಿಲ್ದಾಣ ತಲುಪಿದಾಗ ದ್ವಾರದ ಬಳಿ ಬಂದರಾದರೂ ಕೆಳಗಿಳಿಯುವುದಕ್ಕೆ ಸಾಧ್ಯವಾಗಿರಲಿಲ್ಲ. ಆದರೆ, ಕುಪ್ಪಂ-ಮಲ್ಲನೂರು (ಕುಪ್ಪುನಿಂದ 5 ಕಿಮೀ ದೂರು) ನಿಲ್ದಾಣದ ನಡುವಿನ ರಸ್ತೆಯಲ್ಲಿ ರೈಲಿನ ಹಠಾತ್ ಎಳೆತದ ಪರಿಣಾಮ ಕೆಳಗೆ ಬಿದ್ದು ತೀವ್ರತರದ ಗಾಯಗಳಿಂದಾಗಿ ಅಂದು ಮಧ್ಯರಾತ್ರಿ ಮೃತಪಟ್ಟಿದ್ದರು. ಪ್ರಕರಣ ಸಂಬಂಧ ವಿಚಾರಣೆ ನಡೆಸಿದ್ದ ರೈಲ್ವೆ ನ್ಯಾಯಾಧೀಕರಣ ಮೃತರ ಕುಟುಂಬಕ್ಕೆ 4 ಲಕ್ಷ ರೂ.ಪರಿಹಾರ ನೀಡುವಂತೆ ಸೂಚನೆ ನೀಡಿತ್ತು. ಈ ಆದೇಶ ರದ್ದುಕೋರಿ ನೈಋತ್ಯ ರೈಲ್ವೆ ವ್ಯವಸ್ಥಾಪಕ ನಿರ್ದೇಶಕರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಅರ್ಜಿಯ ವಿಚಾರಣೆ ವೇಳೆ ರೈಲ್ವೆ ಇಲಾಖೆಯ ಪರ ವಕೀಲರು, ಮೃತ ಪ್ರಯಾಣಿಕ ವೈಟ್ ಫೀಲ್ಡ್‌ನಿಂದ ಕುಪ್ಪಂವರೆಗೆ ಮಾತ್ರ ಟಿಕೆಟ್ ಖರೀದಿಸಿದ್ದಾರೆ. ಆದರೆ, ಅವರ ಮೃತದೇಹ ಕುಪ್ಪಂ ನಿಲ್ದಾಣದ ನಂತರದ 5 ಕಿ.ಮೀ ದೂರದಲ್ಲಿ ಪತ್ತೆಯಾಗಿದೆ. ಆದ್ದರಿಂದ ರೈಲ್ವೆ ಇಲಾಖೆಗೂ ಮೃತರಿಗೂ ಯಾವುದೇ ಸಂಬಂಧವಿಲ್ಲ. ಹೀಗಾಗಿ ಯಾವುದೇ ಪರಿಹಾರ ನೀಡುವುದಕ್ಕೆ ಸಾಧ್ಯವಿಲ್ಲ. ಆದ್ದರಿಂದ ರೈಲ್ವೆ ನ್ಯಾಯಾಧೀಕರಣದ ಆದೇಶ ರದ್ದುಪಡಿಸಬೇಕು ಎಂದು ಕೋರಿದರು.