HSRP ನಂಬರ್ ಪ್ಲೇಟ್ ಕಡ್ಡಾಯ ಅಳವಡಿಕೆಗೆ ತಡೆ ನೀಡಲು ಹೈಕೋರ್ಟ್ ನಿರಾಕರಣೆ
ಬೆಂಗಳೂರು, ಸೆ.26: 2019ರ ಎಪ್ರಿಲ್ 1ಕ್ಕಿಂತ ಮುಂಚಿತವಾಗಿ ನೋಂದಣಿಯಾಗಿರುವ ವಾಹನಗಳಿಗೆ ಹೈ ಸೆಕ್ಯುರಿಟಿ ನಂಬರ್ ಪ್ಲೇಟ್ (HSRP) ಅಳವಡಿಕೆ ಕಡ್ಡಾಯಗೊಳಿಸಿ ಸರಕಾರ ಹೊರಡಿಸಿರುವ ಆದೇಶಕ್ಕೆ ತಡೆ ನೀಡಲು ಹೈಕೋರ್ಟ್ ನಿರಾಕರಿಸಿದೆ. ಅಲ್ಲದೇ, ಎಚ್‍ಎಸ್‍ಆರ್‍ಪಿ ಉತ್ಪಾದಕರನ್ನು ಅಂತಿಮಗೊಳಿಸಲು ಕಾಲಮಿತಿ ನಿಗದಿ ಪಡಿಸುವಂತೆ ಸರಕಾರಕ್ಕೆ ನಿರ್ದೇಶನ ನೀಡಿ ಆದೇಶಿಸಿದೆ.
2019ರ ಎಪ್ರಿಲ್ 1ಕ್ಕಿಂತ ಮುನ್ನ ನೋಂದಣಿ ಆಗಿರುವ ವಾಹನಗಳಿಗೆ ಎಚ್‍ಎಸ್‍ಆರ್‍ಪಿ ನಂಬರ್ ಪ್ಲೇಟ್ ಕಡ್ಡಾಯಗೊಳಿಸಿ ಸರಕಾರ ಹೊರಡಿಸಿದ್ದ ಅಧಿಸೂಚನೆಗೆ ತಡೆ ನೀಡುವಂತೆ ಕೋರಿ ಭಾರತೀಯ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್ ಉತ್ಪಾದಕರ ಒಕ್ಕೂಟ ಸೇರಿ ಕೆಲ ಸಂಸ್ಥೆಗಳು ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದವು.
ಈ ಅರ್ಜಿಗಳ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಈ ಆದೇಶ ನೀಡಿದೆ. ರಾಜ್ಯದಲ್ಲಿ 2019ರ ಎಪ್ರಿಲ್ 1ಕ್ಕಿಂತ ಮುನ್ನ ನೋಂದಣಿಯಾದ ವಾಹನಗಳಿಗೆ ಎಚ್‍ಎಸ್‍ಆರ್‍ಪಿ ಅಳವಡಿಸಲು ಮೂಲ ಉಪಕರಣ ತಯಾರಕ(ಓಇಎಂ) ಅಧಿಕೃತ ಡೀಲರ್ ಗಳ ಮೂಲಕ ಅಳವಡಿಸಿಕೊಳ್ಳಲು ಸರಕಾರ ಆ.17ರಂದು ಅಧಿಸೂಚನೆ ಹೊರಡಿಸಿದೆ.
ಕೇಂದ್ರ ಮೋಟಾರು ವಾಹನಗಳ ನಿಯಮಗಳನ್ನು ಮೀರಿ ಅರ್ಜಿದಾರ ಸಂಸ್ಥೆಯನ್ನು ಅಧಿಸೂಚನೆಯಿಂದ ಹೊರಗಿಡಲಾಗಿದೆ. ಕೆಲವು ಪ್ರಭಾವಿ ಸಂಸ್ಥೆಗಳಿಗಷ್ಟೇ ಎಚ್‍ಎಸ್‍ಆರ್ ಪಿ ಅಳವಡಿಕೆಗೆ ಅವಕಾಶ ಮಾಡಿಕೊಡಲಾಗಿದೆ ಎಂದು ಅರ್ಜಿದಾರ ಸಂಸ್ಥೆ ಅರ್ಜಿಯಲ್ಲಿ ಆರೋಪಿಸಿತ್ತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಸರಕಾರ, ಆ ವಾದವನ್ನು ಅಲ್ಲಗಳೆದು ಅಂತಹ ಉದ್ದೇಶವಿಲ್ಲ ಎಂದು ಸ್ಪಷ್ಟಪಡಿಸಿತ್ತು.