ತಾಂ.ಪಂ, ಜಿ.ಪಂಚಾಯತಿ ಚುನಾವಣೆ ವಿಚಾರ: ನಾಲ್ಕು ವರ್ಷಗಳಿಂದ ಚುನಾವಣೆ ನಡೆಸದಿದ್ದಕ್ಕೆ ಹೈಕೋರ್ಟ್ ಅಚ್ಚರಿ
ಬೆಂಗಳೂರು: ರಾಜ್ಯದಲ್ಲಿನ ತಾ.ಪಂ ಹಾಗೂ ಜಿ.ಪಂ. ಚುನಾವಣೆ ನಡೆದಿಲ್ಲವೇ ಎಂದು ಹೈಕೋರ್ಟ್ ಅಚ್ಚರಿ ವ್ಯಕ್ತಪಡಿಸಿದೆ. ಚುನಾವಣೆ ಆಯೋಗದ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಹಾಗೂ ನ್ಯಾ. ಕೆ.ವಿ. ಅರವಿಂದ್ ಅವರಿದ್ದ ವಿಭಾಗೀಯ ಪೀಠ ಅಧಿಕಾರ ವಿಕೇಂದ್ರೀಕರಣಕ್ಕೆ ಸಂಬಂಧಿಸಿದ ಸವಿಂಧಾನದ 73 ಮತ್ತು 74ನೇ ತಿದ್ದುಪಡಿಯಿಂದ ಕರ್ನಾಟಕಕ್ಕೆ ವಿನಾಯಿತಿ ಇದೆಯೇ ಎಂದು ರಾಜ್ಯ ಸರ್ಕಾರವನ್ನು ಮಾರ್ಮಿಕವಾಗಿ ಪ್ರಶ್ನಿಸಿತು. ಈ ವೇಳೆ ಅರ್ಜಿದಾರರ ಪರ ವಕೀಲ ಮೊಹಮ್ಮದ್ ತಾಹಿರ್ ವಾದ ಮಂಡಿಸಿ, ಕಳೆದ ನಾಲ್ಕು ವರ್ಷಗಳಿಂದ ರಾಜ್ಯದ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿಗಳು ಆಡಳಿತಾಧಿಕಾರಿಗಳ ಅಧೀನದಲ್ಲಿವೆ. ಕಾನೂನಿನ ಪ್ರಕಾರ ಅವಧಿ ಮುಗಿಯುವ ಆರು ತಿಂಗಳಲ್ಲಿ ಚುನಾವಣೆ ನಡೆಸಬೇಕು ಎಂಬ ವಿಚಾರವನ್ನು ನ್ಯಾಯಪೀಠದ ಗಮನಕ್ಕೆ ತಂದರು. ಅದಕ್ಕೆ, ನಾಲ್ಕು ವರ್ಷಗಳಿಂದ ಚುನಾವಣೆ ನಡೆದಿಲ್ಲವೇ ಎಂದು ಮುಖ್ಯ ನ್ಯಾಯಮೂರ್ತಿಗಳು ಅಚ್ಚರಿ ವ್ಯಕ್ತಪಡಿಸಿದರು.
ಅಲ್ಲದೆ, ಅಧಿಕಾರ ವಿಕೇಂದ್ರೀಕರಣದ ಮೂಲಕ ಸ್ಥಳೀಯ ಸಂಸ್ಥೆಗಳಿಗೆ ಸ್ವಾಯತ್ತತೆ ನೀಡುವ, ಅವುಗಳ ಸ್ವತಂತ್ರ ನಿರ್ವಹಣೆಗೆ ಸಹಕಾರ ನೀಡುವ ಉದ್ದೇಶದ ಸಂವಿಧಾನದ 73 ಮತ್ತು 74ನೇ ತಿದ್ದುಪಡಿಯಿಂದ ಕರ್ನಾಟಕಕ್ಕೆ ವಿನಾಯಿತಿ ಇದೆಯೇ ಎಂದು ಪ್ರಶ್ನಿಸಿದರು.
ಇದಕ್ಕೆ ಸಮಜಾಯಿಷಿ ನೀಡಿದ ಹೆಚ್ಚುವರಿ ಅಡ್ವೋಕೇಟ್ ಜನರಲ್ ಪ್ರತಿಮಾ ಹೊನ್ನಾಪುರ, ಹಾಗೇನಿಲ್ಲ, ಲೋಕಸಭೆ ಚುನಾವಣೆ ಹಾಗೂ ಇನ್ನಿತರ ಕಾರಣಗಳಿಗೆ ತಾ.ಪಂ. ಜಿ.ಪಂ ಚುನಾವಣೆ ವಿಳಂಬವಾಗಿದೆ. ಈಗಾಗಲೇ ಇದಕ್ಕೆ ಬೇಕಾದ ಸಿದ್ದತೆ ಆರಂಭಿಸಲಾಗಿದೆ. ನಾಲ್ಕು ವಾರಗಳು ಕಾಲಾವಕಾಶ ಬೇಕು ಎಂದು ಮನವಿ ಮಾಡಿದರು. ಈ ಮನವಿ ಮಾನ್ಯ ಮಾಡಿದ ಹೈಕೋರ್ಟ್ ವಿಚಾರಣೆ ಮುಂದೂಡಿದೆ.