ಮೋದಿ ಸರಕಾರದಿಂದ ಅತ್ಯಧಿಕ ಬರ ಪರಿಹಾರ ಬಿಡುಗಡೆ : ಆರ್.ಅಶೋಕ್
ಬೆಂಗಳೂರು : ಎರಡು ನಾಲಿಗೆಯ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮನೆಹಾಳು ಕಾಂಗ್ರೆಸ್ ಬರ ಪರಿಹಾರವಾಗಿ ರಾಜ್ಯಕ್ಕೆ ಕೇವಲ ಚಿಪ್ಪು ನೀಡಿದೆ. ಆದರೆ, ಮೋದಿ ನೇತೃತ್ವದ ಸರಕಾರ ಭರಪೂರ ಪರಿಹಾರ ನೀಡಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ.
ರವಿವಾರ ಇಲ್ಲಿನ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಸಿದ್ದರಾಮಯ್ಯ ಸುಳ್ಳುರಾಮಯ್ಯ ಆಗಿದ್ದು, ರಾವಣನಿಗೆ ಹತ್ತು ತಲೆ ಇದ್ದಂತೆ ಇವರು ಹತ್ತು ನಾಲಿಗೆ ಇಟ್ಟುಕೊಂಡು ಮಾತಾಡುತ್ತಿದ್ದಾರೆ. ಈ ಮೊದಲು ಮಾರ್ಗಸೂಚಿ ಪ್ರಕಾರ, 4,860ಕೋಟಿ ರೂ. ನಷ್ಟ ಪರಿಹಾರ ನೀಡಬೇಕು ಎಂದು ಕೇಳಿ ಈಗ ಕೇಂದ್ರ ಸರಕಾರ 3,454 ಕೋಟಿ ರೂ.ನೀಡಿದ ನಂತರ 18,172 ಕೋಟಿ ರೂ.ನೀಡಬೇಕೆಂದು ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ದೂರಿದರು.
ಹೆಚ್ಚು ಹಣ ಬಿಡುಗಡೆ: ಸದಾ ನಿದ್ದೆ ಮಾಡುವ ಸಿದ್ದರಾಮಯ್ಯನವರಿಗೆ ಮೋದಿ ಸರಕಾರ ಹೆಚ್ಚು ಹಣ ಬಿಡುಗಡೆ ಮಾಡಿದೆ. 2020-21ರಲ್ಲಿ 2242.48 ಕೋಟಿ ರೂ.ಕೇಳಿದ್ದು, 1480 ಕೋಟಿ ರೂ.ಅಂದರೆ ಶೇ.66ರಷ್ಟು ನೀಡಲಾಗಿದೆ. 2021-22ರಲ್ಲಿ 2122.85 ಕೋಟಿ ರೂ.ಕೇಳಿದ್ದು, 2255ಕೋಟಿ ರೂ. ಅಂದರೆ ಶೇ.106ರಷ್ಟು ನೀಡಲಾಗಿದೆ. 2022-23ರಲ್ಲಿ 1944 ಕೋಟಿ ರೂ.ಕೇಳಿದ್ದು, 1603 ಕೋಟಿ ರೂ. ಅಂದರೆ ಶೇ.82.46ರಷ್ಟು ನೀಡಲಾಗಿದೆ ಎಂದು ತಿಳಿಸಿದರು.
ರಾಜ್ಯದಿಂದ ಹಣ ನೀಡಿ: ಪ್ರಧಾನಿ ಮೋದಿ ಯಾವುದೇ ತಾರತಮ್ಯ ಮಾಡದೆ ಪರಿಹಾರ ನೀಡಿದ್ದಾರೆ. ಚುನಾವಣೆ ಸಮಯದಲ್ಲಿ ಇದನ್ನು ಲೂಟಿ ಮಾಡಿ ಬೇರೆ ರಾಜ್ಯಗಳಿಗೆ ಕಳುಹಿಸಬಾರದು. ಇದನ್ನು ಬಿಜೆಪಿ ಕಾವಲುಗಾರರಂತೆ ಕಾಯಲಿದೆ. ಫ್ರೂಟ್ ತಂತ್ರಜ್ಞಾನ ಬಳಸದೆ ಡಿಬಿಟಿ ಮೂಲಕ ರೈತರಿಗೆ ಪರಿಹಾರ ನೀಡಬೇಕು
ಕೇಂದ್ರ ಸರಕಾರದಂತೆಯೇ ರಾಜ್ಯ ಸರಕಾರವು 3,454 ಕೋಟಿ ರೂ.ಹಣ ನೀಡಬೇಕು. ಬಿಜೆಪಿ ಸರಕಾರ ದುಪ್ಪಟ್ಟು ಪರಿಹಾರ ನೀಡಿದಂತೆ ರಾಜ್ಯ ಸರಕಾರವು ಬರ ಪರಿಹಾರ ಬಿಡುಗಡೆ ಮಾಡಬೇಕು. ಇಲ್ಲವಾದರೆ ಪಾಪರ್ ಸರಕಾರ ಎಂದು ನಾನೇ ಶ್ವೇತಪತ್ರ ಬಿಡುಗಡೆ ಮಾಡುತ್ತೇನೆ ಎಂದು ಅಶೋಕ್ ಇದೇ ವೇಳೆ ಎಚ್ಚರಿಸಿದರು.