ಚಿಕ್ಕಮಗಳೂರಿನಲ್ಲಿ ಭಾರೀ ಮಳೆಗೆ ಗುಡ್ಡ ಕುಸಿತ: ಮುಳ್ಳಯ್ಯನಗಿರಿ ಮಾರ್ಗದಲ್ಲಿ ವಾಹನ ಸಂಚಾರ ಬಂದ್, ಪ್ರವಾಸಿಗರಿಗೆ ನಿರ್ಬಂಧ
ಫೈಲ್ ಚಿತ್ರ
ಚಿಕ್ಕಮಗಳೂರು: ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ಬಹುತೇಕ ಹಳ್ಳ, ಕೆರೆ, ನದಿಗಳು ತುಂಬಿ ಅಪಾಯಕಾರಿ ಮಟ್ಟ ತಲುಪಿದೆ.
ತುಂಗಾನದಿ, ಭದ್ರಾ ನದಿ, ಹೇಮಾವತಿ ನದಿ ಸೇರಿದಂತ ಚಿಕ್ಕಮಗಳೂರು ಜಿಲ್ಲೆಯಲ್ಲಿನ ನದಿಗಳು ಅಪಾಯಕಾರಿ ಮಟ್ಟ ಮೀರಿ ಹರಿಯುತ್ತಿರುವ ಹಿನ್ನಲೆಯಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಮುಂಜಾಗ್ರತಾ ಕ್ರಮವಾಗಿ ಪ್ರವಾಸಿಗರಿಗೆ ನಿರ್ಬಂಧ ಹೇರಿದೆ.
ಗುಡ್ಡ ಕುಸಿತದಿಂದ ಮುಳ್ಳಯ್ಯನಗಿರಿ ಮಾರ್ಗದಲ್ಲಿ ವಾಹನ ಸಂಚಾರ ಬಂದ್ ಮಾಡಲಾಗಿದ್ದು, ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ.
ಚಾರ್ಮಾಡಿಘಾಟಿ ಪ್ರದೇಶ ಹಾಗೂ ಮುಳ್ಳಯ್ಯನಗಿರಿ ಪ್ರದೇಶಕ್ಕೆ ಸಾಗುವ ಮಾರ್ಗದಲ್ಲಿ ಅಲ್ಲಲ್ಲಿ ಜಲಪಾತಗಳು ಸೃಷ್ಟಿಯಾಗಿವೆ. ಬಾಬಾ ಬುಡಾನ್ ಗಿರಿಗೆ ತೆರಳುವ ಮಾರ್ಗಮಧ್ಯೆಯಲ್ಲಿರುವ ಹೊನ್ನಮ್ಮನ ಹಳ್ಳ ಉಕ್ಕಿ ಹರಿಯುತ್ತಿದೆ.
ಸೂಚನೆಗಳು
- ಸಾರ್ವಜನಿಕರು/ಪ್ರವಾಸಿಗರು ನದಿಗಳಿಗೆ ಅಥವಾ ತಗ್ಗು ಪ್ರದೇಶಗಳಿಗೆ ಇಳಿಯದಂತೆ ಕಟ್ಟೆಚ್ಚರ ವಹಿಸುವುದು.
- ಮಕ್ಕಳು, ಸಾರ್ವಜನಿಕರು ವಿದ್ಯುತ್ ಕಂಬ, ಕಟ್ಟಡಗಳು, ಮರಗಳ ಹತ್ತಿರ/ಕೆಳಗೆ ನಿಲ್ಲದೆ ಸುರಕ್ಷಿತ ಸ್ಥಳಗಳನ್ನು ತಲುಪುವುದು.
- ವಿದ್ಯಾರ್ಥಿಗಳ ಪೋಷಕರು ಹಾಗೂ ಶಾಲಾ ಮುಖ್ಯಸ್ಥರು, ವಿದ್ಯಾರ್ಥಿಗಳು ನೀರು ನಿಂತಿರುವ ತಗ್ಗು ಪ್ರದೇಶ, ಕರೆ, ನದಿಗಳ ತೀರಕ್ಕೆ ಹೋಗದಂತ ಜಾಗ್ರತೆ ವಹಿಸುವುದು.
- ಹಿರಿಯ ನಾಗರೀಕರು ಕರೆ, ನದಿಗಳ ತೀರಕ್ಕೆ ಹೋಗದಂತ ಜಾಗ್ರತೆ ವಹಿಸುವುದು. ಹೊರಗೆ ತೆರಳುವುದು ಅನಿವಾರ್ಯವಿದ್ದಲ್ಲಿ ಕುಟುಂಬದ ಸದಸ್ಯರೊಂದಿಗೆ ತರಳತಕ್ಕದ್ದು.
- ಅತಿಯಾದ ಮಳೆಯಿಂದ ಧರೆ, ಗುಡ್ಡ ಕುಸಿತ ಉಂಟಾಗುವ ಸಂಭವವಿರುವುದರಿಂದ ಚಾರಣಿಗರು ಟ್ರಕ್ಕಿಂಗ್ ಮಾಡುವುದನ್ನು ತಾತ್ಕಾಲಿಕವಾಗಿ ಮುಂದೂಡುವುದು.
- ಹೋಂ ಸ್ಟೇ, ರೆಸಾರ್ಟ್, ಅರಣ್ಯ ಇಲಾಖೆ ವತಿಯಿಂದ ಕೈಗೊಳ್ಳುವ ಟ್ರಕ್ಕಿಂಗ್ ಅನ್ನು ಸದ್ಯಕ್ಕೆ ಸ್ಥಗಿತಗೊಳಿಸುವುದು.
- ರಾಜ್ಯದ ವಿವಿಧ ಸ್ಥಳಗಳಿಂದ ಚಿಕ್ಕಮಗಳೂರು ಜಿಲ್ಲೆಗೆ ಬರುವ ಪ್ರವಾಸಿಗರು ಚಿಕ್ಕಮಗಳೂರು ಜಿಲ್ಲಾ ಪ್ರವಾಸವನ್ನು ತಾತ್ಕಾಲಿಕವಾಗಿ ಮುಂದೂಡುವುದು.
Next Story