ಜೆಡಿಎಸ್ ಪಕ್ಷ ಸರಿಯಿಲ್ಲವೆಂದು ಅವರ ಅಳಿಯ ಬೇರೆ ಪಕ್ಷದಿಂದ ಸ್ಪರ್ಧಿಸುತ್ತಿದ್ದಾರೆ : ಸಂಸದ ಡಿ.ಕೆ.ಸುರೇಶ್
ಬೆಂಗಳೂರು: ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ನನ್ನ ವಿರುದ್ಧ ಡಾ.ಮಂಜುನಾಥ್ ಸ್ಪರ್ಧೆಯನ್ನು ಸ್ವಾಗತ ಮಾಡುತ್ತೇನೆ. ದೇವೇಗೌಡರ ಕುಟುಂಬದವರು ನನಗೆ, ಶಿವಕುಮಾರ್ ಗೆ ಹೊಸದಲ್ಲ. ಜೆಡಿಎಸ್ ಪಕ್ಷ ಸರಿಯಿಲ್ಲವೆಂದು ಅವರ ಅಳಿಯ ಬೇರೆ ಪಕ್ಷದಿಂದ ಸ್ಪರ್ಧಿಸುವ ನಿರ್ಧಾರ ಮಾಡಿದ್ದಾರೆ. ಈ ಬಗ್ಗೆ ಜೆಡಿಎಸ್ ಕಾರ್ಯಕರ್ತರು ಆಲೋಚನೆ ಮಾಡಬೇಕು ಎಂದು ಹಾಲಿ ಸಂಸದ, ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ತಿಳಿಸಿದ್ದಾರೆ.
ಗುರುವಾರ ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ದೇವೇಗೌಡರಿಗೆ ಜನಪ್ರಿಯತೆ ಇಲ್ಲವೆಂದು ಅವರ ಅಳಿಯ ಬೇರೆ ಪಕ್ಷವನ್ನು ಆಯ್ಕೆ ಮಾಡಿಕೊಂಡಿದ್ದಾರೆ, ಇದನ್ನು ಅವರು ಹೇಳಬೇಕು. ಅವರ ಪಕ್ಷ, ನಾಯಕತ್ವ ಅಸ್ತಿತ್ವದಲ್ಲಿ ಇಲ್ಲ ಎನ್ನುವುದನ್ನು ಅರಿತು ಅಳಿಯ ಈ ನಿರ್ಧಾರ ಮಾಡಿದ್ದಾರೆ ಎಂಬುದು ನನ್ನ ಭಾವನೆ ಎಂದು ನುಡಿದರು.
ಕಾರ್ಯಕರ್ತರಿಗೆ ಆಹ್ವಾನ: ದೇವೇಗೌಡರ ಕುಟುಂಬ ಸದಸ್ಯರು ಆ ಪಕ್ಷ ಸರಿ ಇಲ್ಲ ಎಂದು ಬೇರೆ ಪಕ್ಷದಿಂದ ಚುನಾವಣೆಯಲ್ಲಿ ನಿಲ್ಲುತ್ತಿದ್ದಾರೆ. ನಾನೂ ಬೆಂ.ಗ್ರಾಮಾಂತರ ಜಿಲ್ಲೆಯ ಮಗ, ನನ್ನ ಜೊತೆ ಕೈಜೋಡಿಸಿ, ಜಿಲ್ಲೆ ತಾಲೂಕಿನ ಅಭಿವೃದ್ಧಿಗೆ, ರೈತರ ಅಭಿವೃದ್ಧಿಗೆ ಪಕ್ಷ ಭೇದ ಮರೆತು, ನೀವೆಲ್ಲರೂ ಪಕ್ಷವನ್ನು ಬಿಟ್ಟು ಬರಬೇಕು ಎಂದು ಸುರೇಶ್, ಜೆಡಿಎಸ್ ಕಾರ್ಯಕರ್ತರಿಗೆ ಆಹ್ವಾನ ನೀಡಿದರು.
ಡಾ.ಮಂಜುನಾಥ್, ದೇವೇಗೌಡರ ಅಳಿಯ ಎಂದು ಗೊತ್ತೆ ಹೊರತು, ಮಂಜುನಾಥ್ ಗೊತ್ತಿಲ್ಲ. ಈದೀಗ ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ ಮೈತ್ರಿ ಅಭ್ಯರ್ಥಿ ಎನ್ನುವುದು ಈಗ ಗೊತ್ತಾಗಿದೆ. ಇನ್ನು ಬಿಜೆಪಿಯಲ್ಲಿ ಪ್ರತಾಪ್ ಸಿಂಹಗೆ ಕೈಕೊಟ್ಟಿದ್ದಾರೆ. ಪಕ್ಷ ಕಟ್ಟಿದ ಕಟೀಲ್‍ರನ್ನು ಏನು ಮಾಡಿದ್ದಾರೆ ಗೊತ್ತಿಲ್ಲ. ‘ನನಗೆ ಗುಂಡಿಕ್ಕಿ ಕೊಲ್ಲುತ್ತೇನೆ’ ಎಂದ ಈಶ್ವರಪ್ಪ ಬಂಡಾಯ ಎನ್ನುತ್ತಿದ್ದಾರೆ. ಸಂವಿಧಾನ ಬದಲಾವಣೆ ಮಾಡಲು ಹೋದವರ ಕಥೆ ಏನಾಗುತ್ತೋ ಗೊತ್ತಿಲ್ಲ ಎಂದು ಸುರೇಶ್ ಲೇವಡಿ ಮಾಡಿದರು.