‘ಬೆಂಗಳೂರು ಸುತ್ತಮುತ್ತಲಿನ ಪಟ್ಟಣಗಳನ್ನು ಸ್ಯಾಟಲೈಟ್ ಟೌನ್ಶಿಪ್ಗಳಾಗಿ ಅಭಿವೃದ್ಧಿ’ ; ಸಚಿವ ಸಂಪುಟ ಅನುಮೋದನೆ : ಎಚ್.ಕೆ.ಪಾಟೀಲ್

ಎಚ್.ಕೆ.ಪಾಟೀಲ್
ಬೆಂಗಳೂರು : ಬೆಂಗಳೂರಿನ ಜನದಟ್ಟಣೆಯನ್ನು ಕಡಿಮೆ ಮಾಡಲು ಬೆಂಗಳೂರು ಸುತ್ತಮುತ್ತಲಿನ ದೇವನಹಳ್ಳಿ, ನೆಲಮಂಗಲ, ಹೊಸಕೋಟೆ, ದೊಡ್ಡಬಳ್ಳಾಪುರ, ಮಾಗಡಿ ಮತ್ತು ಬಿಡದಿ ಪಟ್ಟಣಗಳನ್ನು ರಸ್ತೆ ಮತ್ತು ರೈಲು ಸಂಪರ್ಕಗಳೊಂದಿಗೆ ಸ್ಯಾಟಲೈಟ್ ಟೌನ್ಶಿಪ್ ಗಳನ್ನಾಗಿ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು.
ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 2006ರಲ್ಲಿ ಬಿಡದಿ, ಸಾತನೂರು, ರಾಮನಗರ, ಸೋಲೂರು ಮತ್ತು ನಂದಗುಡಿಯಲ್ಲಿ 5 ಸಮಗ್ರ ಉಪನಗರಗಳನ್ನು ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿತ್ತು. ರಾಜ್ಯ ಸರಕಾರದ 2024-25 ನೇ ಸಾಲಿನ ಬಜೆಟ್ನಲ್ಲಿ ಟೌನ್ಶಿಪ್ ಅಭಿವೃದ್ಧಿಯನ್ನು ಕೈಗೆತ್ತಿಕೊಳ್ಳುವುದಾಗಿ ಘೋಷಿಸಲಾಗಿದೆ ಎಂದು ಹೇಳಿದರು.
ಬೆಂಗಳೂರಿನ ಜನದಟ್ಟಣೆಯನ್ನು ಕಡಿಮೆ ಮಾಡಲು, ಸರಕಾರವು ಹಲವಾರು ಯೋಜನೆಗಳನ್ನು ರೂಪಿಸುತ್ತದೆ, ಸುಸ್ಥಿರ ಮೂಲ ಸೌಕರ್ಯದೊಂದಿಗೆ ರಾಜ್ಯದಲ್ಲಿ ಆಕರ್ಷಕ ನಗರಗಳನ್ನು ಅಭಿವೃದ್ಧಿಪಡಿಸಿ ಆ ಮೂಲಕ ಉದ್ಯೋಗ ಅವಕಾಶಗಳನ್ನು ಕಲ್ಪಿಸುವುದು. ಬೆಂಗಳೂರು ಸುತ್ತಮುತ್ತಲಿನ ದೇವನಹಳ್ಳಿ, ನೆಲಮಂಗಲ, ಹೊಸಕೋಟೆ, ದೊಡ್ಡಬಳ್ಳಾಪುರ, ಮಾಗಡಿ ಮತ್ತು ಬಿಡದಿ ಪಟ್ಟಣಗಳನ್ನು ರಸ್ತೆ ಮತ್ತು ರೈಲು ಸಂಪರ್ಕದೊಂದಿಗೆ ಸ್ಯಾಟಲೈಟ್ ಟೌನ್ಶಿಪ್ಗಳಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಅವರು ತಿಳಿಸಿದರು.
ಗ್ರೇಟರ್ ಬೆಂಗಳೂರು ಬಿಡದಿ ಸ್ಮಾರ್ಟ್ ಸಿಟಿ ಯೋಜನಾ ಪ್ರಾಧಿಕಾರವನ್ನು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವಾಗಿ ಮೇಲ್ದರ್ಜೆಗೇರಿಸಲಾಗಿದೆ. ಈ ಪ್ರಾಧಿಕಾರದ ವ್ಯಾಪ್ತಿಯಲ್ಲಿನ ರಾಮನಗರ ತಾಲೂಕಿನ ಬಿಡದಿ ಹೋಬಳಿಯ ಬೈರಮಂಗಲ ಬನ್ನಿಗೆರೆ, ಹೊಸೂರು, ಕೆ.ಜಿ. ಗೊಲ್ಲರಪಾಳ್ಯ, ಕಂಚುಗಾರನಹಳ್ಳಿ, ಅರಳಾಳುಸಂದ್ರ, ಕೆಂಪಯ್ಯನಪಾಳ್ಯ, ಕಂಚುಗಾರನಹಳ್ಳಿ ಕಾವಲು, ಮಂಡಲಹಳ್ಳಿ ಹಾಗೂ ಹಾರೋಹಳ್ಳಿ ಹೋಬಳಿಯ ವಡೇರಹಳ್ಳಿ ಭಾಗಶ: ಗ್ರಾಮ ಸೇರಿ ಒಟ್ಟು 10 ಗ್ರಾಮಗಳ ವ್ಯಾಪ್ತಿಯ ಪ್ರದೇಶದಲ್ಲಿ ‘ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ’ ಯೋಜನೆಯನ್ನು ಅನುಷ್ಟಾನಗೊಳಿಸಲು ಸಚಿವ ಸಂಪುಟ ಅನುಮೋದಿಸಿದೆ ಎಂದು ಎಚ್.ಕೆ.ಪಾಟೀಲ್ ಹೇಳಿದರು.
ಸಮಗ್ರ ಉಪನಗರ ಯೋಜನೆಗಳ ಅನುಷ್ಟಾನಕ್ಕಾಗಿ ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರ, ಇಲಾಖೆ ಮತ್ತು ಸಂಸ್ಥೆಗಳನ್ನೊಳಗೊಂಡಂತೆ ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲು ಅನುಮೋದನೆ ನೀಡಲಾಗಿದೆ ಎಂದು ಅವರು ತಿಳಿಸಿದರು.
ಜಾಗತಿಕ ಟೆಂಡರ್ ಕರೆಯುವ ಮೂಲಕ ಅಂತರ್ರಾಷ್ಟ್ರೀಯ ಮಾನದಂಡಗಳ ಪರಿಕಲ್ಪನೆಯಲ್ಲಿ ಟೌನ್ ಶಿಪ್ ಅನ್ನು ವಿನ್ಯಾಸಗೊಳಿಸಲು ಮತ್ತು ಯೋಜಿಸಲು ಅರ್ಹ ಸಂಸ್ಥೆಯನ್ನು ನೇಮಿಸಲು ಅನುಮೋದನೆ ನೀಡಲಾಗಿದೆ ಎಂದು ಎಚ್.ಕೆ.ಪಾಟೀಲ್ ಹೇಳಿದರು.
ಇತರ ನಿರ್ಣಯಗಳು: ಪೊಲೀಸ್ ಇಲಾಖೆಯ ನೇರ ನೇಮಕಾತಿಯಲ್ಲಿ ಕಾನ್ಸ್ ಟೇಬಲ್ನಿಂದ ಡಿವೈಎಸ್ಪಿ ವರೆಗೆ ಪ್ರಶಂಸನೀಯ ಕ್ರೀಡಾಪಟುಗಳ ಮೀಸಲಾತಿ ಪ್ರಮಾಣ ಶೇ.2 ರಿಂದ ಶೇ.3ಕ್ಕೆ ಹೆಚ್ಚಳ.
ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಕಡಣಿ ಗ್ರಾಮದ ಹತ್ತಿರ ಭೀಮಾ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ ಕಾಮಗಾರಿಯನ್ನು 44.50 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಹಾಗೂ ‘ಹೊಂಬೆಳಕು’ ಯೋಜನೆಯಡಿ 50 ಗ್ರಾಮ ಪಂಚಾಯತಿಗಳಲ್ಲಿ ಸೋಲಾರ್ ಬೀದಿ ದೀಪಗಳನ್ನು 25 ಕೋಟಿ ರೂ.ಗಳ ವೆಚ್ಚದಲ್ಲಿ ಅಳವಡಿಸುವ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ.
ಪ್ರೀಮಿಯಂ ಎಫ್.ಎ.ಆರ್ ಕುರಿತು ‘ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನೆ (ತಿದ್ದುಪಡಿ) ವಿಧೇಯಕ, 2024’ ಕ್ಕೆ ತರಲಾಗಿದ್ದ ವಿಧೇಯಕ ಹಿಂಪಡೆಯಲು ತೀರ್ಮಾನ. ವೀರಪ್ಪನ್ ಕಾರ್ಯಾಚರಣೆಯಲ್ಲಿ ಕರ್ತವ್ಯ ನಿರ್ವಹಿಸಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವೈದ್ಯಾಧಿಕಾರಿ, ಸಿಬ್ಬಂದಿಗಳಿಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಲಭ್ಯವಿರುವ ಹಂಚ್ಯಾ-ಸಾತಗಳ್ಳಿ ‘ಎ’ ವಲಯದಲ್ಲಿ ನಿವೇಶನ ಮಂಜೂರು.
ಭಟ್ಕಳ ತಾಲೂಕಿನ ಮುರುಡೇಶ್ವರದಲ್ಲಿ ಸುಸಜ್ಜಿತ ಮೀನುಗಾರಿಕೆ ಹೊರ ಬಂದರು ನಿರ್ಮಾಣ ಯೋಜನೆಯನ್ನು ಕೈಗೊಳ್ಳಲು 2024ರ ಜೂ.14ರಂದು ಹೊರಡಿಸಿರುವ ಆದೇಶಕ್ಕೆ ಘಟನೋತ್ತರ ಅನುಮೋದನೆ.
ಎಲ್ಲ ಏತ ನೀರಾವರಿ ಕೆರೆಗಳ ಮೀನುಗಾರಿಕೆಯನ್ನು ಕಡ್ಡಾಯವಾಗಿ ಇ-ಟೆಂಡರ್ ಮೂಲಕ ವಿಲೇವಾರಿ ಮಾಡಲು ಹಾಗೂ ಏತ ನೀರಾವರಿ ಕೆರೆಗಳ ವಿಲೇವಾರಿಗೆ ಸಂಬಂಧಿಸಿದಂತೆ ಸರಕಾರಿ ಸವಾಲನ್ನು (ಬೇಸ್ ಪ್ರೈಸ್) ಹಾಲಿ ಇರುವ 300 ರೂ.ಗಳಿಂದ 1,500 ರೂ.ಗಳಿಗೆ (ಪ್ರತಿ ಹೆಕ್ಟೇರ್ಗೆ) ಹೆಚ್ಚಿಸಲು ಅನುಮೋದನೆ.
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ 19 ಮೊರಾರ್ಜಿ ದೇಸಾಯಿ ವಸತಿ ಶಾಲೆ, ಕಾಲೇಜುಗಳ ಕಟ್ಟಡಗಳನ್ನು 304 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಹಾಗೂ ಪ್ರಧಾನಮಂತ್ರಿ ಜನ ವಿಕಾಸ ಕಾರ್ಯಕ್ರಮ ಯೋಜನೆಯಡಿ 12 ವಸತಿ ಶಾಲೆ, ವಿದ್ಯಾರ್ಥಿ ನಿಲಯಗಳನ್ನು 191.19 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ನಿರ್ಮಾಣ ಮಾಡಲು ಆಡಳಿತಾತ್ಮಕ ಅನುಮೋದನೆ.
ತುಮಕೂರು ಜಿಲ್ಲೆಯ ಮಧುಗಿರಿ ಪುರಸಭೆಯ ವ್ಯಾಪ್ತಿಯಲ್ಲಿ ಹಾಲಿ ಇರುವ ಪ್ರದೇಶಗಳ ಜೊತೆಗೆ ಮಧುಗಿರಿ ಕಂದಾಯ ಗ್ರಾಮ, ಹರಿಹರರೊಪ್ಪ ಭಾಗಶಃ ಕಂದಾಯ ಗ್ರಾಮ ಮತ್ತು ಪಾಲ್ಯದ ಹಳ್ಳಿಯ ಕೆಲವು ಸರ್ವೆ ನಂಬರುಗಳ ಪ್ರದೇಶಗಳನ್ನು ಸೇರ್ಪಡೆ ಮಾಡಲು ಸಚಿವ ಸಂಪುಟ ಅನುಮೋದನೆ.
ಬೀದರ್ ನಗರಸಭೆಯೊಂದಿಗೆ 9 ಗ್ರಾಮ ಪಂಚಾಯಿತಿಗಳ 32 ಗ್ರಾಮಗಳನ್ನು ಸೇರಿಸಿ, ಬೀದರ್ ಮಹಾನಗರ ಪಾಲಿಕೆಯನ್ನಾಗಿ ಮೇಲ್ದರ್ಜೆಗೇರಿಸಲು ಹಾಗೂ ಸರಕಾರಿ ನೌಕರರಿಗೆ ಸಂಬಳ ಖಾತೆ ಆಧಾರಿತ, ಸಾಮಾಜಿಕ ಭದ್ರತೆ ಒದಗಿಸಲು ಸಂಪುಟ ಅನುಮೋದನೆ.