ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಕಿರುಕುಳಕ್ಕೆ ಅಂಕುಶ | ಎರಡು ದಿನಗಳಲ್ಲಿ ಸುಗ್ರೀವಾಜ್ಞೆ ಹೊರಡಿಸಲು ನಿರ್ಧಾರ: ಎಚ್.ಕೆ.ಪಾಟೀಲ್

ಎಚ್.ಕೆ.ಪಾಟೀಲ್
ಬೆಂಗಳೂರು : ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಸಂಸ್ಥೆಗಳು, ನೋಂದಣಿಯಾಗದ ಲೇವಾದೇವಿ ದಾರರು ಸಾಲ ವಸೂಲಿಯಲ್ಲಿ ಕಿರುಕುಳ, ಅಮಾನವೀಯ ವರ್ತನೆ ಮಾಡುವುದು, ಬೇಕಾಬಿಟ್ಟಿ ಬಡ್ಡಿ ಹಾಕುವುದನ್ನು ನಿಯಂತ್ರಿಸಲು ಜಾರಿಗೆ ತರಲು ಉದ್ದೇಶಿಸಿರುವ ಮಸೂದೆಯನ್ನು ಎರಡು ದಿನಗಳಲ್ಲಿ ಸುಗ್ರೀವಾಜ್ಞೆ ಮೂಲಕ ಹೊರಡಿಸಲು ನಿರ್ಧರಿಸಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು.
ಗುರುವಾರ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಉನ್ನತಮಟ್ಟದ ಸಭೆಯ ಬಳಿಕ ಸುದಿಗಾರರೊಂದಿಗೆ ಮಾತನಾಡಿದ ಅವರು, ಮೈಕ್ರೋ ಫೈನಾನ್ಸ್ ಸಂಸ್ಥೆಗಳಿಂದ ಸಂತ್ರಸ್ತರಾದವರಿಗೆ ಬೇರೆ ಯಾವ ಸವಲತ್ತು ಕೊಡಲು ಸಾಧ್ಯ ಎಂಬುದರ ಕುರಿತು ಸಚಿವ ಸಂಪುಟ ಸಭೆಯಲ್ಲಿ ಹಾಗೂ ಈಗ ನಡೆದಿರುವ ಸಭೆಯಲ್ಲಿ ಚರ್ಚೆ ಮಾಡಲಾಗಿದೆ ಎಂದು ಹೇಳಿದರು.
ಕೆಲವು ಹೊಸ ವಿಚಾರಗಳನ್ನು ಹಾಗೂ ಇಂದಿನ ಸಭೆಯಲ್ಲಿ ಎಲ್ಲರೂ ಸಹಮತ ಸೂಚಿಸಿರುವ ಅಂಶಗಳನ್ನು ನಮ್ಮ ಕರಡು ಮಸೂದೆಯಲ್ಲಿ ಸೇರಿಸಲು ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ. ಹಿರಿಯ ಐಎಎಸ್ ಅಧಿಕಾರಿ ಅಮ್ಲಾನ್ ಬಿಸ್ವಾಸ್, ಹಣಕಾಸು ಇಲಾಖೆಯ ಅಧಿಕಾರಿ ವಿಶಾಲ್, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿಗೆ ಈ ಜವಾಬ್ದಾರಿ ವಹಿಸಲಾಗಿದೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.
ನಾಳೆ ಮಧ್ಯಾಹ್ನದ ವೇಳೆಗೆ ಕರಡು ಮಸೂದೆಗೆ ಸ್ವರೂಪ ಬರುತ್ತದೆ. ನಾಳೆ ಅಥವಾ ನಾಳಿದ್ದು ಅದನ್ನು ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಿ, ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಲಾಗುವುದು. ಈಗಾಗಲೇ ಸಚಿವ ಸಂಪುಟವು ಸುಗ್ರೀವಾಜ್ಞೆ ಹೊರಡಿಸುವ ಅಧಿಕಾರವನ್ನು ಮುಖ್ಯಮಂತ್ರಿಗೆ ನೀಡಿರುವುದರಿಂದ, ಕರಡು ಮಸೂದೆಯನ್ನು ಪುನಃ ಸಚಿವ ಸಂಪುಟದ ಮುಂದೆ ಮಂಡಿಸಿ ಅನುಮೋದನೆ ಪಡೆಯುವ ಅಗತ್ಯವಿಲ್ಲ ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.