ಒಳಮೀಸಲಾತಿ ಜಾರಿಗೆ ನಾವು ವಿರುದ್ಧವಾಗಿದ್ದೇವೆಂಬ ಮಾತುಗಳು ಸತ್ಯಕ್ಕೆ ದೂರ : ಜಿ.ಪರಮೇಶ್ವರ್ ಸ್ಪಷ್ಟನೆ
ಡಾ.ಜಿ.ಪರಮೇಶ್ವರ್
ಬೆಂಗಳೂರು: "ಪರಿಶಿಷ್ಟ ವರ್ಗದ ಎಲ್ಲರೂ ಸಮಾನವಾಗಿ ಅಭಿವೃದ್ಧಿಯಾಗಬೇಕು ಎಂಬ ದೃಷ್ಟಿಯಿಂದ ಒಳಮೀಸಲಾತಿ ಜಾರಿಗೆ ಒಪ್ಪಿದ್ದೇವೆ" ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಸ್ಪಷ್ಟಪಡಿಸಿದರು.
ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ʼಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಸಚಿವರಾದ ಎಚ್.ಸಿ.ಮಹದೇವಪ್ಪ, ಪ್ರಿಯಾಂಕ್ ಖರ್ಗೆ ಮತ್ತು ನಾನು ಒಳಮೀಸಲಾತಿಗೆ ವಿರುದ್ಧವಾಗಿದ್ದಾರೆ, ಸಹಕರಿಸುತ್ತಿಲ್ಲ ಎಂದು ಕೆಲ ಕಿಡಿಗೇಡಿಗಳು ಆರೋಪಿಸುತ್ತಿದ್ದಾರೆ. ಅನಾವಶ್ಯಕವಾಗಿ ನಮ್ಮ ಹೆಸರುಗಳನ್ನು ತರುವುದು ಸರಿಯಲ್ಲʼ ಎಂದರು.
ʼಒಳಮೀಸಲಾತಿ ವಿಚಾರವಾಗಿ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ನೇರವಾಗಿ ಚರ್ಚಿಸಿದ್ದೇನೆ. ಎಚ್.ಸಿ.ಮಹದೇವಪ್ಪ ಸೇರಿದಂತೆ ಅನೇಕರೊಂದಿಗೆ ಮಾತನಾಡಿದ್ದೇನೆ. ಒಳಮೀಸಲಾತಿ ಜಾರಿಗೆ ವಿರುದ್ಧವಾಗಿದ್ದೇವೆ ಎಂದು ಆರೋಪ ಮಾಡಿರುವುದು ಸತ್ಯಕ್ಕೆ ದೂರವಾದುದು. ಇನ್ನು ಮುಂದಾದರೂ ಈ ರೀತಿಯಾಗಿ ಮಾತನಾಡುವುದನ್ನು ನಿಲ್ಲಿಸಲಿʼ ಎಂದು ಹೇಳಿದರು.
ಒಳಮೀಸಲಾತಿ ಜಾರಿಗೆ ನಾವೆಲ್ಲ ಒಮ್ಮತದ ನಿರ್ಣಯವನ್ನು ತೆಗೆದುಕೊಂಡಿದ್ದೇವೆ. ಒಂದು ವೇಳೆ ನಾವು ವಿರೋಧಿಸುವುದಾದರೆ ಬಹಿರಂಗವಾಗಿ ಹೇಳುತ್ತೇವೆ. ಯಾರಿಗೋ ಹೆದರಿಕೊಂಡು ಒಪ್ಪಿಕೊಳ್ಳುತ್ತಿಲ್ಲ. ಎಲ್ಲರೂ ಸಮಾನವಾಗಿ ಅಭಿವೃದ್ಧಿ ಹೊಂದಬೇಕು ಎಂಬ ದೃಷ್ಟಿಯಿಂದ ಒಳಮೀಸಲಾತಿ ಜಾರಿಗೆ ಒಪ್ಪಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಪರಿಶಿಷ್ಟ ವರ್ಗದ ಎಲ್ಲ ಶಾಸಕರೊಂದಿಗೆ ಸಭೆ ಮಾಡಿದ್ದೇನೆ. ಹಿಂದೆ ಕೆಲವರು ಒಳಮೀಸಲಾತಿ ಬೇಡ ಎಂಬ ಮಾತುಗಳನ್ನು ಆಡುತ್ತಿದ್ದರು. ಮೊನ್ನೆ ನಡೆದ ಸಭೆಯಲ್ಲಿ ಒಳಮೀಸಲಾತಿ ಜಾರಿಗೆ ನಮ್ಮದು ತಕರಾರು ಇಲ್ಲ. ಆದರೆ, ಅಂಕಿ-ಅಂಶಗಳು ಸರಿಯಾಗಿಲ್ಲ ಎಂಬುದನ್ನು ತಿಳಿಸಿದ್ದರು. ಡೇಟಾ ಸರಿಯಾಗಿ ಇಲ್ಲದೆ ಇರುವಾಗ ಜಾರಿಯಾದರೆ ತೊಂದರೆಯಾಗುತ್ತದೆ ಎಂದು ಹೇಳಿದರು.
ನಾನು ಮಹಾರಾಷ್ಟ್ರ ಚುನಾವಣೆ ಹಿನ್ನೆಲೆಯಲ್ಲಿ ಮುಂಬೈಗೆ ಹೋಗಿದ್ದರಿಂದ ಕ್ಯಾಬಿನೆಟ್ಗೆ ಹಾಜರಾಗಲು ಆಗಲಿಲ್ಲ. ಒಳಮೀಸಲಾತಿಗೆ ಸಮಿತಿ ಮಾಡಿರುವುದನ್ನು ಸ್ವಾಗತಿಸುತ್ತೇನೆ. ಆದರೆ, ಮೂರು ತಿಂಗಳ ಗಡುವು ನೀಡಿರುವುದು ಮಹತ್ವವಾದದ್ದು. ಒಳಮೀಸಲಾತಿಗೆ ಎಲ್ಲರೂ ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದರು.
ಒಳಮೀಸಲಾತಿ ಮಾಡಿರುವುದು ಸರಿಯಿಲ್ಲ ಎಂದು ಬಿಜೆಪಿಯವರು ಆರೋಪಿಸಲಿ ಸಂತೋಷ. ಆದರೆ, ಯಾರೋ ಕೆಲವರು, ನಾವು ಒಳಮೀಸಲಾತಿ ವಿರುದ್ಧ ಇದ್ದೇವೆ ಎಂದು ಹೇಳುವುದು ಸರಿಯಲ್ಲ. ಪರಿಶಿಷ್ಟ ವರ್ಗಗಳ ಜಾತಿಗಳ ಬಗ್ಗೆ ಸ್ಪಷ್ಟವಾದ ಅಂಕಿ-ಅಂಶ ಇಲ್ಲ. ಜಾತಿಗಣತಿಯಲ್ಲಿ ಆ ರೀತಿಯ ಅಂಕಿ-ಅಂಶ ಇರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಡೇಟಾ ಇದ್ದರೆ ಉಪಯೋಗಕ್ಕೆ ಬರುತ್ತದೆ. ಸಮಿತಿಯವರು ತೆಗೆದುಕೊಳ್ಳುತ್ತಾರೆ ಎಂದು ತಿಳಿಸಿದರು.
ಕಾಂಗ್ರೆಸ್ ನೇತೃತ್ವದ ಮೈತ್ರಿ ಸರಕಾರ ರಚನೆ :
ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಕುರಿತು ಪ್ರತಿಕ್ರಿಯಿಸಿದ ಅವರು, ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮೈತ್ರಿಯಾಗಿ ಸ್ಪರ್ಧಿಸುತ್ತಿದೆ. ಒಟ್ಟು 288 ಕ್ಷೇತ್ರಗಳ ಪೈಕಿ 103 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ಸ್ಪರ್ಧಿಸುತ್ತಿದ್ದು, ಉಳಿದ ಕ್ಷೇತ್ರಗಳಲ್ಲಿ ಮೈತ್ರಿ ಪಕ್ಷ ಸ್ಪರ್ಧಿಸುತ್ತಿದೆ. ಹೆಚ್ಚು ಸೀಟುಗಳನ್ನು ಗೆದ್ದು ಕಾಂಗ್ರೆಸ್ ನೇತೃತ್ವದ ಮೈತ್ರಿ ಸರಕಾರ ರಚನೆಯಾಗುತ್ತದೆ ಎಂದರು.
ಬಿಜೆಪಿ ದೊಡ್ಡ ವಿಷಯ ಮಾಡಲು ಹೊರಟಿದೆ:
ವಕ್ಫ್ ಬೋರ್ಡ್ನವರು ಜಿಲ್ಲಾಧಿಕಾರಿಗಳ ಮುಖಾಂತರ ನೋಟಿಸ್ ನೀಡಿದ್ದಾರೆ. ನೋಟಿಸ್ ವಾಪಸ್ ಪಡೆಯಿರಿ, ಈ ಬಗ್ಗೆ ಪರಿಶೀಲಿಸೋಣ ಎಂದು ಮುಖ್ಯಮಂತ್ರಿಗಳು ಸೂಚಿಸಿದ್ದಾರೆ. ಈ ವಿಷಯ ಇಲ್ಲಿಗೆ ಮುಗಿದಿದೆ. ಪರಿಶೀಲನೆ ಮಾಡುವರೆಗೂ ಯಾವುದೇ ರೈತರಿಗೂ ನೋಟಿಸ್ ನೀಡುವುದು ಬೇಡ ಎಂದು ಮುಖ್ಯಮಂತ್ರಿಯವರು ಸ್ಪಷ್ಟಪಡಿಸಿದ್ದಾರೆ. ಈ ವಿಚಾರಕ್ಕೆ ಬಿಜೆಪಿಯವರು ಇಲ್ಲದಿರುವ ಬಣ್ಣಕಟ್ಟಿ ದೊಡ್ಡ ವಿಷಯ ಮಾಡಲು ಹೊರಟಿದ್ದಾರೆ. ಆಡಳಿತಾತ್ಮಕವಾಗಿ ನೋಟಿಸ್ ಹೋಗಿದೆ. ಅದನ್ನು ವಾಪಸ್ ಪಡೆಯಲಾಗುವುದು. ಕ್ರಮ ತೆಗೆದುಕೊಳ್ಳುವುದಿಲ್ಲ ಎಂದು ಈಗಾಗಲೇ ಹೇಳಲಾಗಿದೆ ಎಂದರು.