ರಾಜ್ಯ ಸರಕಾರದ ವಿರುದ್ಧ ರಾಜ್ಯಪಾಲರು ಇದ್ದಾರೆ : ಗೃಹ ಸಚಿವ ಜಿ.ಪರಮೇಶ್ವರ್
ಬೆಂಗಳೂರು : ರಾಜ್ಯಪಾಲರು ಇಷ್ಟೊಂದು ಮಸೂದೆ ವಾಪಸು ಕಳುಹಿಸಿದ್ದು ನೋಡಿದರೆ ನಮ್ಮ ಸರಕಾರದ ವಿರುದ್ಧ ರಾಜ್ಯಪಾಲರು ಇದ್ದಾರೆ ಎನ್ನುವುದು ಸ್ಪಷ್ಟ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಶುಕ್ರವಾರ ಸದಾಶಿವನರ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವಾಭಾವಿಕವಾಗಿ ಸರಕಾರ ಹಾಗೂ ರಾಜ್ಯಪಾಲರಿಗೆ ಹೊಂದಾಣಿಕೆ ಇಲ್ಲದೆ ಇದ್ದರೆ ಈ ರೀತಿಯ ಬೆಳವಣಿಗೆ ನಡೆಯುತ್ತೆ. ಒಂದೇ ಬಾರಿಗೆ 11 ಮಸೂದೆ ವಾಪಸ್ ಕಳಿಸಿದ್ದಾರೆ. ಇಂತಹ ಘಟನೆಗಳು ಒಳ್ಳೆಯದಲ್ಲ ಎಂದು ನುಡಿದರು.
ಬೇರೆ ರಾಜ್ಯಗಳ ರಾಜ್ಯಪಾಲರ ನಡತೆ ಮತ್ತು ವರ್ತನೆ ಬಗ್ಗೆ ಪ್ರಶ್ನೆಗಳು ಎದ್ದಿವೆ. ಈ ಬಗ್ಗೆ ಇಂಡಿಯಾ ಒಕ್ಕೂಟ ಏನು ನಿರ್ಧಾರ ತೆಗೆದುಕೊಳ್ಳಲಿದೆ ಎಂಬುದು ಗೊತ್ತಿಲ್ಲ. ಬೇರೆಬೇರೆ ರಾಜ್ಯದಲ್ಲಿಯೂ ಸಹ ಅಲ್ಲಿನ ರಾಜ್ಯಪಾಲರ ವರ್ತನೆ ಬಗ್ಗೆ ಧ್ವನಿ ಎದ್ದಿದೆ. ತಮಿಳುನಾಡು, ಪಶ್ಚಿಮ ಬಂಗಾಳ, ಕೇರಳದಲ್ಲಿ ರಾಜ್ಯಪಾಲರ ನಡತೆ ಬಗ್ಗೆ ಪ್ರಶ್ನೆಗಳು ಬಂದಿವೆ. ಈ ಬಗ್ಗೆ ಚರ್ಚೆ ಆಗುತ್ತದೆಯೇ ಏನೆಂಬುದು ಮಾಹಿತಿ ಇಲ್ಲ ಎಂದು ಹೇಳಿದರು.
ಜಿಂದಾಲ್‍ಗೆ ಭೂಮಿ ಮಾರಾಟದ ಕುರಿತು ಪ್ರತಿಕ್ರಿಯಿಸಿ, ವಿರೋಧ ಪಕ್ಷದಲ್ಲಿದ್ದಾಗ ಅನೇಕ ಪ್ರಶ್ನೆಗಳನ್ನು ಕೇಳಲಾಗಿತ್ತು. ಈಗ ಉತ್ತರ ಸಿಕ್ಕಿದ್ದು, ಕೋರ್ಟ್ ಸಹ ಆದೇಶ ಮಾಡಿದೆ. ಸ್ಥಳೀಯ ಬೆಲೆಯನ್ನು ನಿಗದಿ ಮಾಡಿ ಮಾರಾಟ ಮಾಡಲಾಗಿದೆ ಎಂದು ಅವರು ತಿಳಿಸಿದರು.