ಒಂದೆರಡು ದಿನಗಳಲ್ಲಿ ಪಿಎಸ್‍ಐ ಪರೀಕ್ಷೆಗೆ ಸೂಕ್ತ ದಿನಾಂಕ ಪ್ರಕಟ : ಗೃಹ ಸಚಿವ ಜಿ.ಪರಮೇಶ್ವರ್
ಬೆಂಗಳೂರು : ‘ಸೆ.28ಕ್ಕೆ ನಡೆಸುವುದಾಗಿ ಹೇಳಲಾಗಿದ್ದ ಪಿಎಸ್‍ಐ ಪರೀಕ್ಷೆಯನ್ನು ಯುಪಿಎಸ್‍ಸಿ ಪರೀಕ್ಷೆ ಇರುವ ಕಾರಣ ಮತ್ತೊಂದು ದಿನಾಂಕದಂದು ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದ್ದು, ಒಂದೆರಡು ದಿನಗಳಲ್ಲಿ ಸೂಕ್ತವಾದ ದಿನಾಂಕವನ್ನು ಪ್ರಕಟಿಸಲಾಗುವುದು ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.
ಗುರುವಾರ ಈ ಬಗ್ಗೆ ಪತ್ರಿಕಾ ಪ್ರಕಟನೆ ನೀಡಿರುವ ಅವರು, ಕರ್ನಾಟಕ ಪರೀಕ್ಷಾ ಪ್ರಾಧಿಕಾರವು 402 ಪಿಎಸ್‍ಐ ಹುದ್ದೆಗಳಿಗೆ ಸೆ.22ರಂದು ನಡೆಸಲು ಉದ್ದೇಶಿಸಿದ್ದ ಪರೀಕ್ಷೆಯನ್ನು ಸೆ.28ರಂದು ಪರೀಕ್ಷೆ ನಡೆಸುವುದಾಗಿ ಹೇಳಲಾಗಿತ್ತು. ಆದರೆ ಆ ದಿನವೂ ಯುಪಿಎಸ್‍ಸಿ ಪರೀಕ್ಷೆ ಇರುವ ಕಾರಣ ಒಂದೆರಡು ದಿನಗಳಲ್ಲಿ ಮತ್ತೊಂದು ದಿನಾಂಕವನ್ನು ನಿಗದಿಪಡಿಸಿ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಬಿಜೆಪಿ ಆಡಳಿತದ ಅವಧಿಯಲ್ಲಿ 545 ಪಿಎಸ್‍ಐ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ನಡೆದ ಅಕ್ರಮವಾದ ಬಳಿಕ ನೇಮಕಾತಿ ನಡೆದಿಲ್ಲ. ಎಲ್ಲ ಗೊಂದಲದ ನಡುವೆಯೂ ಕೋರ್ಟ್‍ನಿಂದ ಅನುಮತಿ ಪಡೆದು ಮರುಪರೀಕ್ಷೆ ನಡೆಸಲಾಗಿದೆ. ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸುವ ಹಂತದಲ್ಲಿದೆ. ಈ ನಡುವೆಯೇ ಮತ್ತೆ ಕೆಲವರು ಕೋರ್ಟ್‍ಗೆ ಹೋಗಿದ್ದು, ಅಂತಿಮಪಟ್ಟಿ ಪ್ರಕಟಿಸಲು ವಿಳಂಬವಾಗುತ್ತಿದೆ ಎಂದು ಜಿ.ಪರಮೇಶ್ವರ್ ಹೇಳಿದ್ದಾರೆ.
ನಾಲ್ಕು ವರ್ಷಗಳಿಂದ ಪಿಎಸ್‍ಐ ನೇಮಕಾತಿ ನಡೆದಿಲ್ಲ. ಸಿಂಧುತ್ವ, ದಾಖಲಾತಿ ಪರಿಶೀಲನೆ, ತರಬೇತಿ ಪಡೆದು ಇಲಾಖೆಗೆ ಸೇರಲು ಒಂದು ವರ್ಷ ಬೇಕಾಗುತ್ತದೆ. ಎರಡು ವರ್ಷ ಪ್ರೊಬೆಷನರಿ ಅವಧಿಯಲ್ಲಿ ಕಾರ್ಯನಿರ್ವಹಿಸುತ್ತಾರೆ. ಈ ಪರಿಸ್ಥಿತಿಯ ಹಿನ್ನೆಲೆಯಲ್ಲಿ, 402 ಪಿಎಸ್‍ಐ ಹುದ್ದೆಗಳಿಗೆ ಆದಾಷ್ಟು ಬೇಗ ಪರೀಕ್ಷೆ ನಡೆಸಲು ಮುಂದಾಗಿದ್ದೇವೆ. ಇದಾದ ನಂತರ 600 ಪಿಎಸ್‍ಐ ಹುದ್ದೆಗಳಿಗೂ, ನೇಮಕಾತಿಗೂ ಸಿದ್ಧತೆ ಮಾಡಿಕೊಳ್ಳಬೇಕಿದೆ ಎಂದು ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಬಿಜೆಪಿ ಆಡಳಿತದ ಅವಧಿಯಲ್ಲಿ ನಡೆದ ಎಲ್ಲ ಹಗರಣಗಳನ್ನು ಪರಿಶೀಲಿಸುತ್ತಿದ್ದೇವೆ. ದ್ವೇಷದ ರಾಜಕಾರಣ ಮಾಡಬಾರದು ಎಂಬುದು ನಮ್ಮ ಉದ್ದೇಶ. ಬಿಜೆಪಿಯವರು ದ್ವೇಷದ ರಾಜಕಾರಣ ಮುಂದುವರಿಸಿದರೆ, ನಾವು ಅದನ್ನೇ ಮಾಡಬೇಕಾಗುತ್ತದೆ ಎಂದು ಜಿ.ಪರಮೇಶ್ವರ್ ಹೇಳಿದ್ದಾರೆ.