ಕಾಮಗಾರಿಯಲ್ಲಿ ಮುಸ್ಲಿಮರಿಗೆ ಮೀಸಲಾತಿ ಪ್ರಸ್ತಾವನೆ ತಪ್ಪುಗ್ರಹಿಕೆ : ಗೃಹ ಸಚಿವ ಜಿ.ಪರಮೇಶ್ವರ್
ಜಿ.ಪರಮೇಶ್ವರ್
ಬೆಂಗಳೂರು : "ಮುಸ್ಲಿಂ ಸಮುದಾಯದ ಕೆಲ ಶಾಸಕರು ಮತ್ತು ಮುಖಂಡರು ಕಾಮಗಾರಿಗಳಲ್ಲಿ ಶೇ.4ರಷ್ಟು ಮೀಸಲಾತಿ ನೀಡುವಂತೆ ಮನವಿ ಮಾಡಿದ್ದಾರೆ. ಮನವಿಯನ್ನು ಪರಿಶೀಲಿಸುವಂತೆ ಮುಖ್ಯಮಂತ್ರಿಯವರು ಸಂಬಂಧಪಟ್ಟ ಇಲಾಖೆಗೆ ತಿಳಿಸಿದ್ದಾರೆ. ಇಲಾಖೆಯು ಪರಿಶೀಲಿಸಿದ ಬಳಿಕ ಪ್ರಸ್ತಾವನೆಯು ಸಚಿವ ಸಂಪುಟದ ಮುಂದೆ ತರಬೇಕು. ಕ್ಯಾಬಿನೆಟ್ನಲ್ಲಿ ತೀರ್ಮಾನ ಆದ ಬಳಿಕ ಸರಕಾರಿ ಆದೇಶ ಆಗಬೇಕಾಗುತ್ತದೆ. ಈವರೆಗೂ ಕ್ಯಾಬಿನೆಟ್ ಮುಂದೆ ಪ್ರಸ್ತಾವನೆ ಬಂದಿಲ್ಲ.ಇದನ್ನು ತಪ್ಪುಗ್ರಹಿಕೆ ಮಾಡಲಾಗಿದೆ" ಗೃಹ ಸಚಿವ ಜಿ.ಪರಮೇಶ್ವರ್ ಸ್ಪಷ್ಟಪಡಿಸಿದರು.
ಬುಧವಾರ ಸದಾಶಿವನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ʼಯಾವುದೇ ಸಮುದಾಯವನ್ನು ತುಷ್ಟಿಕರಣ ಮಾಡುವಂತಹ ಅಗತ್ಯವಿಲ್ಲ. ಯಾವುದೇ ಸಮುದಾಯ, ಧರ್ಮದ ಬಡವರ ಅಭಿವೃದ್ಧಿಗೆ ಒತ್ತು ನೀಡುವುದು ಸರಕಾರದ ಕರ್ತವ್ಯ. ಒಂದಷ್ಟು ಸವಲತ್ತು ಕಲ್ಪಿಸಿದರೆ, ಅದನ್ನು ತುಷ್ಟೀಕರಣ ಎನ್ನುವುದು ಸರಿಯಲ್ಲ, ಎಂದರು.
ನಾಗೇಂದ್ರ ಸಂಪುಟಕ್ಕೆ ಮರುಸೇರ್ಪಡೆ :
ʼವಾಲ್ಮೀಕಿ ಹಗರಣದಲ್ಲಿ ನಾಗೇಂದ್ರ ಅವರದ್ದು ತಪ್ಪಿಲ್ಲ ಎಂಬುದು ತೀರ್ಮಾನವಾದರೆ ಸಂಪುಟಕ್ಕೆ ಮರುಸೇರ್ಪಡೆ ಮಾಡಿಕೊಳ್ಳಬಹುದು. ಈ ಹಿಂದೆ ಜಾರ್ಜ್ ಅವರ ಮೇಲೆ ಆರೋಪ ಬಂದಾಗ, ತಪ್ಪಿಲ್ಲ ಎಂಬುದು ಸಾಬೀತಾದ ಬಳಿಕ ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳಲಾಗಿತ್ತು. ವಾಲ್ಮೀಕಿ ನಿಗಮ ಹಗರಣದ ಪ್ರಕರಣದ ತನಿಖೆ ಮುಗಿದು, ನಾಗೇಂದ್ರ ಪಾತ್ರ ಏನು ಇಲ್ಲ ಎಂದು ತೀರ್ಮಾನ ಬಂದಾಗ ವಾಪಸ್ ತೆಗೆದುಕೊಳ್ಳುವ ಸಾಧ್ಯತೆ ಇದೆʼ ಎಂದರು.
ʼಸಚಿವ ಸಂಪುಟ ಪುನರ್ ರಚನೆ ವಿಚಾರ ನನಗೆ ಗೊತ್ತಿಲ್ಲ. ಇದಕ್ಕೆ ಮುಖ್ಯಮಂತ್ರಿಯವರು ಉತ್ತರ ನೀಡಬೇಕು. ಇದು ನಮ್ಮ ಹಂತದಲ್ಲಿ ಚರ್ಚೆ ಆಗುವುದಿಲ್ಲ. ಮುಖ್ಯಮಂತ್ರಿ ಮತ್ತು ಹೈಕಮಾಂಡ್ಗೆ ಬಿಟ್ಟಿರುವ ವಿಚಾರʼ ಎಂದು ಹೇಳಿದರು.
ಚುನಾವಣೆ ಮುಗಿದ ಬಳಿಕ ಒಳಮೀಸಲಾತಿಗೆ ಆಯೋಗ ರಚನೆ:
ʼವಿಧಾನಸಭೆ ಉಪ ಚುನಾವಣೆ ಮುಗಿದ ಬಳಿಕ ಒಳಮೀಸಲಾತಿಗೆ ಆಯೋಗ ರಚಿಸಲಾಗುತ್ತದೆ ಎಂದು ಈಗಾಗಲೇ ಮುಖ್ಯಮಂತ್ರಿಯವರು ಸ್ಪಷ್ಟನೆ ನೀಡಿದ್ದಾರೆ. ಇಷ್ಟು ವರ್ಷಗಳಿಂದ ಹೋರಾಟ ಮಾಡಿದ್ದಾರೆ. ಕಾನೂನು ಚೌಕಟ್ಟಿನಲ್ಲಿ ಸರಿಯಾಗಿ ಮಾಡಬೇಕಾಗುತ್ತದೆ. ಇಲ್ಲವಾದರೆ ಯಾರಾದರೂ ಕೋರ್ಟ್ಗೆ ಹೋಗುತ್ತಾರೆ. ಈ ಸಂದರ್ಭದಲ್ಲಿ ಆಯೋಗ ರಚಿಸಿದರೆ ಚುನಾವಣಾ ಆಯೋಗ ಪ್ರಶ್ನಿಸುತ್ತದೆ. ಇದೇ ಕಾರಣಕ್ಕೆ ಆಯೋಗ ರಚಿಸಿಲ್ಲ. ಚುನಾವಣೆ ಮುಗಿದ ಬಳಿಕ ಆರಂಭಿಸಲಾಗುತ್ತದೆʼ ಎಂದರು.
ಸಂಪುಟ ಉಪ ಸಮಿತಿಯಿಂದ ನ್ಯಾ.ಡಿ.ಕುನ್ನಾ ಪರಿಶೀಲನೆ :
ಕೋವಿಡ್ ಹಗರಣದ ನ್ಯಾ.ಮೈಕಲ್ ಡಿ.ಕುನ್ನಾ ಅವರ ವರದಿಯನ್ನು ಉಪ ಸಮಿತಿ ಸಂಪೂರ್ಣವಾಗಿ ಪರಿಶೀಲನೆ ಮಾಡಬೇಕು. ಬೆಡ್ ಖರೀದಿ, ಉಪಕರಣ, ಮೆಡಿಸಿನ್ ಮತ್ತು ಟೆಸ್ಟ್ ಕಿಟ್ ಖರೀದಿ ಹೀಗೆ ಬೇರೆ ಬೇರೆ ವಿಚಾರಗಳಿವೆ. ಎಲ್ಲವನ್ನು ಉಪ ಸಮಿತಿಯಲ್ಲಿ ಪರಿಶೀಲಿಸಿ, ತೀರ್ಮಾನಕ್ಕೆ ಬರುತ್ತೇವೆ. ಈವರೆಗೆ ಉಪಸಮಿತಿ ಸಭೆ ನಡೆಸಿಲ್ಲ. ಇದಕ್ಕೆ ಡಿಸಿಎಂ ಅವರು ಅಧ್ಯಕ್ಷರಿದ್ದಾರೆ. ನ್ಯಾಯಮೂರ್ತಿ ಮೈಕಲ್ ಡಿ.ಕುನ್ನಾ ಅವರು ಹೇಳಿರುವುದು ಸರಿ ಇದೆ, ಪುರಾವೆಗಳಿವೆ ಎಂಬುದಾದರೆ ಸಚಿವ ಸಂಪುಟದ ಮುಂದೆ ತೆಗೆದುಕೊಂಡು ಹೋಗುತ್ತೇವೆ. ಅಲ್ಲಿ ಮುಂದಿನ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.