ಮಾಜಿ ಸಚಿವರಿಗೆ ಹನಿಟ್ರ್ಯಾಪ್ : ಇಬ್ಬರ ಬಂಧನ
ಮಂಜುಳಾ ಪಾಟೀಲ್/ಶಿವರಾಜ್ ಪಾಟೀಲ್
ಬೆಂಗಳೂರು : ಮಾಜಿ ಸಚಿವರೊಬ್ಬರಿಗೆ ಹನಿಟ್ರ್ಯಾಪ್ ಬಲೆಗೆ ಕೆಡವಿ ವಿಡಿಯೊಂದರ ಮೇಲೆ ಬೆದರಿಕೆವೊಡ್ಡಿರುವ ಆರೋಪದಡಿ ನಲಪಾಡ್ ಬ್ರಿಗೇಡ್ ಕಲಬುರಗಿ ಘಟಕ ಅಧ್ಯಕ್ಷೆ ಮಂಜುಳಾ ಪಾಟೀಲ್ ಸೇರಿ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಹನಿಟ್ರ್ಯಾಪ್ ಮಾಡಿ, 20 ಲಕ್ಷ ರೂಪಾಯಿ ನೀಡುವಂತೆ ಬೆದರಿಕೆ ಹಾಕಲಾಗಿದೆ ಎಂದು ಮಾಜಿ ಸಚಿವ, ಹಾಲಿ ಕಾಂಗ್ರೆಸ್ ಮುಖಂಡ ನೀಡಿದ ದೂರು ಆಧರಿಸಿ ನಲಪಾಡ್ ಬ್ರಿಗೇಡ್ ನ ಕಲಬುರಗಿ ಘಟಕ ಅಧ್ಯಕ್ಷೆ ಅಳಂದ ಕಾಲೋನಿಯ ಮಂಜುಳಾ ಪಾಟೀಲ್(32) ಹಾಗೂ ಆಕೆಯ ಪತಿ ಶಿವರಾಜ್ ಪಾಟೀಲ್(39)ಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ 8 ದಿನಗಳ ಕಾಲ ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸಲಾಗಿದೆ.
ಆರೋಪಿ ಮಂಜುಳಾ ಪಾಟೀಲ್, ಮಾಜಿ ಸಚಿವರ ಮೊಬೈಲ್ ನಂಬರ್ ಪಡೆದು ವಾಟ್ಸಾಪ್ನಲ್ಲಿ ಪರಿಚಯ ಮಾಡಿಕೊಂಡು ನಂತರ, ಇಬ್ಬರ ನಡುವೆ ವಾಟ್ಸಾಪ್ ವಿಡಿಯೊ ಕರೆ ಮೂಲಕ ಖಾಸಗಿಯಾಗಿ ಕಾಣಿಸಿಕೊಂಡಿದ್ದಾರೆ. ಅದರಲ್ಲಿ ಖಾಸಗಿಯಾಗಿ ಕಾಣಿಸಿಕೊಂಡ ಮಾಜಿ ಸಚಿವರ ದೃಶ್ಯಗಳನ್ನು ವಿಡಿಯೋ, ಫೋಟೋಗಳನ್ನು ಸಂಗ್ರಹ ಮಾಡಿಕೊಂಡು, ನಂತರ ಈ ವಿಡಿಯೋವನ್ನು ಮಾಜಿ ಸಚಿವರಿಗೆ ಕಳುಹಿಸಿ ಬೆದರಿಕೆ ಹಾಕಲು ಶುರು ಮಾಡಿದ್ದಾರೆ ಎನ್ನಲಾಗಿದೆ.
ಇದನ್ನು ಮಾಜಿ ಸಚಿವರು ಪುತ್ರನ ಬಳಿ ಹೇಳಿಕೊಂಡಿದ್ದು, ಬಳಿಕ ಮಹಿಳೆಯ ವಿರುದ್ಧ ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದಾರೆ. ಜೊತೆಗೆ, ಹಣ ಕೊಡುವುದಾಗಿ ಮಹಿಳೆಯನ್ನು ಬೆಂಗಳೂರಿಗೆ ಕರೆಸಿ, ಆಕೆ ಹಣ ಪಡೆಯಲು ಬಂದಾಗ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.