ಹೊನ್ನಾಳಿಯಿಂದ ಸ್ಪರ್ಧೆ: ಬಿಜೆಪಿ ಸಂಸದರ ಹೇಳಿಕೆಗೆ ರೇಣುಕಾಚಾರ್ಯ ಪ್ರತಿಕ್ರಿಯೆ ಏನು?
ದಾವಣಗೆರೆ: ''ನಾನು ಮುಂದಿನ ಚುನಾವಣೆಯಲ್ಲಿ ಹೊನ್ನಾಳಿಯಿಂದ ಸ್ಪರ್ಧೆ ಮಾಡುತ್ತೇನೆ ಎಂಬ ಸಂಸದ ಜಿ.ಎಂ. ಸಿದ್ದೇಶ್ವರ್ ಹೇಳಿಕೆಯಿಂದ ನೋವಾಗಿದೆ. ಅವರ ಈ ಹೇಳಿಕೆಯನ್ನು ಖಂಡಿಸುತ್ತೇನೆ'' ಎಂದು ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.
ಹಿರೇಮಠ ಗ್ರಾಮದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘‘ನಾನು ಚುನಾವಣೆಯಲ್ಲಿ ಸೋತ ಮೇಲೆ ನನ್ನ ಕಾರ್ಯಕರ್ತರು ಮತ್ತು ಮುಖಂಡರು ಲೋಕಸಭಾ ಚುನಾವಣೆಗೆ ನಿಲ್ಲುವಂತೆ ಒತ್ತಾಯ ಮಾಡಿದ್ದರು. ಅದೂ ಅಲ್ಲದೇ ಸಿದ್ದೇಶಣ್ಣ ಅವರು ಕಳೆದ ಚುನಾವಣೆಯಲ್ಲಿ ಇದು ನನ್ನ ಕೊನೆ ಚುನಾವಣೆ ಎಂದು ಕೂಡ ಹೇಳಿದ್ದರು. ಇದರಿಂದ ನಾನು ಲೋಕಸಭಾ ಚುನಾವಣೆಯಲ್ಲಿ ಪ್ರಬಲ ಆಕಾಂಕ್ಷಿ ಎಂದು ಹೇಳಿದ್ದೆ. ಆದರೆ ಸಂಸದರು ಹೊನ್ನಾಳಿಗೆ ಬಂದು ನಾನು ಚುನಾವಣೆ ಮಾಡುತ್ತೇನೆಂದು ಹೇಳಿಕೆ ನೀಡಿದ್ದಾರೆ. ಅದರ ಜತೆಗೆ ಹೊನ್ನಾಳಿ ತಾಲೂಕಿನಲ್ಲಿ ನಮ್ಮ ಸಮಾಜ ಜಾಸ್ತಿ ಇದೆ ಎಂದು ಹೇಳಿದ್ದಾರೆ. ಇದು ಸರಿಯಲ್ಲ, ಅವರು ಹೊನ್ನಾಳಿಯಲ್ಲಿ ಬಿಜೆಪಿ ಕಾರ್ಯಕರ್ತರು ಹೆಚ್ಚಾಗಿದ್ದಾರೆ. ಹೀಗಾಗಿ ನಾನು ಅಲ್ಲಿ ಚುನಾವಣೆ ಮಾಡುತ್ತೇನೆ ಎಂದು ಹೇಳಿದ್ದರೆ ನನಗೆ ನೋವಾಗುತ್ತಿರಲಿಲ್ಲ’’ ಎಂದು ತಿರುಗೇಟು ನೀಡಿದರು.
‘‘ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಹೊಸ ಬೆಳವಣಿಗೆಗಳು ಆಗುತ್ತಿವೆ. ಬೆಂಗಳೂರಿನ ಪೊಲೀಸ್ ಸ್ಟೇಶನ್ ಒಂದರಲ್ಲಿ ಸಿಬ್ಬಂದಿಗೆ ಕುರಾನ್ ಗ್ರಂಥ ವಿತರಣೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಹಾಗೇನಾದರೂ ಮಾಡಿದ್ದರೆ ಅದು ತಪ್ಪು. ಇದು ಧರ್ಮ ಧರ್ಮಗಳ ನಡುವೆ ಸಂಘರ್ಷವನ್ನುಂಟು ಮಾಡುತ್ತದೆ’’ ಎಂದು ಹೇಳಿದರು.
‘‘ನಮ್ಮ ಸರಕಾರ ಇದ್ದಾಗ ಅಮಾಯಕರ ಮೇಲೆ ಹಾಕಿದ ಕೇಸುಗಳನ್ನು ವಾಪಸ್ ಪಡೆಯಲಾಗುತ್ತಿತ್ತು. ಆದರೆ ಈ ಕಾಂಗ್ರೆಸ್ ಸರಕಾರದಲ್ಲಿ ಭಯೋತ್ಪಾದಕರ ಮೇಲಿನ ಕೇಸುಗಳನ್ನು ವಾಪಸ್ ತೆಗೆಸಲಾಗುತ್ತಿದೆ. ಇದನ್ನು ಖಂಡಿಸುತ್ತೇನೆ’’ ಎಂದರು.