ರಾಜ್ಯದಲ್ಲಿ ಭಾರೀ ಮಳೆಗೆ ಮನೆಗೋಡೆ ಕುಸಿತ; 2 ಪ್ರತ್ಯೇಕ ಪ್ರಕರಣದಲ್ಲಿ ಮಕ್ಕಳು ಮೃತ್ಯು
ಭಾಗ್ಯ ಚಲಮರದ್- ಮೃತ ಮಗು
ದಾವಣಗೆರೆ, ಜು.25: ರಾಜ್ಯದಲ್ಲಿ ಕಳೆದ ಮೂರು ದಿನಗಳಿಂದ ನಿರಂತರ ಮಳೆಯಿಂದಾಗಿ ಮನೆಗೋಡೆ ಕುಸಿದು ಬಿದ್ದು 2 ಪ್ರತ್ಯೇಕ ಪ್ರಕರಣದಲ್ಲಿ ಇಬ್ಬರು ಮಕ್ಕಳು ಮೃತಪಟ್ಟಿರುವ ಘಟನೆ ಮಂಗಳವಾರ ವರದಿಯಾಗಿದೆ.
ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಕುಂಬಳೂರು ಗ್ರಾಮದಲ್ಲಿ ಮನೆಗೋಡೆ ಕುಸಿದು ಬಿದ್ದು ಒಂದು ವರ್ಷದ ಹೆಣ್ಣು ಮಗು ಮೃತಪಟ್ಟಿದೆ. ನಿನ್ನೆ ರಾತ್ರಿ ವೇಳೆ ಮಲಗಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ ತಿಳಿದು ಬಂದಿದೆ.
ಗ್ರಾಮದ ಕೆಂಚಪ್ಪ ಹಾಗೂ ಲಕ್ಷ್ಮಿದೇವಿ ಅವರ ಪುತ್ರಿ ಸ್ಪೂರ್ತಿ ಮೃತಪಟ್ಟಿರುವ ಮಗು ಎಂದು ಗುರುತಿಸಲಾಗಿದೆ. ತಂದೆ ಕೆಂಚಪ್ಪಗೆ ಗಾಯವಾಗಿದ್ದು, ಅವರನ್ನು ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಅವರು ಅಪಾಯದಿಂದ ಪಾರಾಗಿದ್ದಾರೆ. ನಿರಂತರ ಮಳೆಯಿಂದಾಗಿ ಮನೆಯ ಗೋಡೆ ಶಿಥಿಲಗೊಂಡಿತ್ತು ಎಂದು ಹೇಳಲಾಗಿದೆ.
ಮತ್ತೊಂದು ಪ್ರಕರಣದಲ್ಲಿ ಹಾವೇರಿ ತಾ. ಮಾಳಪುರ ಗ್ರಾಮದಲ್ಲಿ ಮನೆ ಗೋಡೆ ಕುಸಿದು ಬಿದ್ದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ 3 ವರ್ಷದ ಹೆಣ್ಣು ಮಗು ಮೃತಪಟ್ಟಿರುವುದು ವರದಿಯಾಗಿದೆ.
ಮೃತ ಬಾಲಕಿ ಭಾಗ್ಯ ಚಲಮರದ್ (3) ಎಂದು ಗುರುತಿಸಲಾಗಿದೆ. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತಪಟ್ಟಿದೆ. ಘಟನೆಯಲ್ಲಿ ಇನ್ನೊಂದು ಮಗುವಿಗೆ ಗಂಬೀರ ಗಾಯಗಳಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.