ಹುಬ್ಬಳ್ಳಿ: ಸಾಲ ವಸೂಲಿಗೆ ಬಂದ ಬ್ಯಾಂಕ್ ಮ್ಯಾನೇಜರ್ ಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡ ರೈತ..!
ಹುಬ್ಬಳ್ಳಿ: ಬೆಳೆ ಸಾಲ ವಸೂಲಿಗೆ ಬಂದ ಬ್ಯಾಂಕ್ ಮ್ಯಾನೇಜರ್ ನನ್ನು ಕಂಡ ರೈತನೊಬ್ಬ ಸಾಲಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಂಡು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ ಘಟನೆ ಹುಬ್ಬಳ್ಳಿಯ ಮೊರಬ ವ್ಯಾಪ್ತಿಯ ಗುಮ್ಮಗೋಳದಲ್ಲಿ ನಡೆದಿದೆ.
ಮೃತ ರೈತನನ್ನು ಫಕ್ಕೀರಪ್ಪ ಜಾವೂರ್ ( 75) ಎಂದು ಗುರುತಿಸಲಾಗಿದೆ. ಕಳೆದ ಕೆಲ ದಿನಗಳ ಹಿಂದೆ ಬೆಳೆ ಸಾಲ ವಸೂಲಿಗೆ ಮುಂದಾಗಿದ್ದ ಮೊರಬ ಬ್ಯಾಂಕ್ ಮ್ಯಾನೇಜರ್ ಮಾನಸಿಕ ಕಿರುಕುಳ ನೀಡಿರುವ ಬಗ್ಗೆ ಗ್ರಾಮಸ್ಥರು ಆರೋಪಿಸಿದ್ದು, ಈ ಹಿನ್ನೆಲೆಯಲ್ಲಿಯೇ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.
19 ಎಕರೆ 16 ಗುಂಟಾ ಕೃಷಿ ಜಮೀನನ್ನು ಹೊಂದಿದ್ದ ರೈತ, ಮೊರಬ ಗ್ರಾಮದಲ್ಲಿರುವ ಬ್ಯಾಂಕ್ ನಲ್ಲಿ ಷರತ್ತುಗಳಿಗೆ ಒಪ್ಪಿ 2015 ರಲ್ಲಿ 14 ಲಕ್ಷ 50 ಸಾವಿರ ರೂ. ಬೆಳೆಸಾಲ ತೆಗೆದುಕೊಂಡಿದ್ದು, 2017 ರವರೆಗೆ ಸುಮಾರು ಎರಡು ವರ್ಷಗಳ ಕಾಲ ಬೆಳೆಸಾಲ ರಿನೀವಲ್ ಮಾಡಿದ್ದ. ಆದರೆ 2017 ರಿಂದ ಇಲ್ಲಿಯವರೆಗೆ ಯಾವುದೇ ರೀತಿಯ ಸಾಲ ಮರು ಪಾವತಿ ಮಾಡಿರಲಿಲ್ಲ ಎನ್ನಲಾಗುತ್ತಿದೆ.
ಇದೀಗವಸೂಲಿಗೆ ಹೋಗಿದ್ದ ಮ್ಯಾನೇಜರ್ ನನ್ನು ಬಂಧನ ಮಾಡಲಾಗಿದೆ ಎಂದು ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ.