ಹುಬ್ಬಳ್ಳಿ: ಪೊಲೀಸರ ಮೇಲೆ ದಾಳಿಗೆ ಮುಂದಾದ ರೌಡಿಶೀಟರನ್ನು ಕಾಲಿಗೆ ಗುಂಡಿಕ್ಕಿ ಬಂಧನ
ಇಬ್ಬರು ಪೊಲೀಸರಿಗೆ ಗಾಯ
ಹುಬ್ಬಳ್ಳಿ, ನ.26: ರೌಡಿ ಶೀಟರ್ ಓರ್ವ ಸ್ಥಳ ಮಹಜರು ವೇಳೆ ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ ಘಟನೆ ಶನಿವಾರ ಸಂಜೆ ಹುಬ್ಬಳ್ಳಿಯ ಗದಗ ರಸ್ತೆಯ ರೈಲ್ವೆ ಬ್ರಿಡ್ಜ್ ಬಳಿ ನಡೆದಿದೆ. ಈ ವೇಳೆ ಪೊಲೀಸರು ಪ್ರತಿಯಾಗಿ ಆತನ ಕಾಲಿಗೆ ಗುಂಡು ಹಾರಿಸಿದ್ದಾರೆ.
ಘಟನೆಯಲ್ಲಿ ಶಹರ ಠಾಣೆ ಪಿಎಸ್ಸೈ ವಿನೋದ ಮತ್ತು ಕಾನ್ ಸ್ಟೇಬಲ್ ಜಗದೀಶ ಎಂಬವರಿಗೆ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೊಲೆಗೆ ಯತ್ನ, ಅಪಹರಣ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಸತೀಶ ಗೋನಾ ಎಂಬಾತ ವ್ಯಕ್ತಿಯೊಬ್ಬರ ಕೊಲೆಗೆ ಸಂಚು ರೂಪಿಸಿ ಶನಿವಾರ ಕೈಯಲ್ಲಿ ತಲವಾರು ಹಿಡಿದು ಹುಬ್ಬಳ್ಳಿಯ ಗದಗ ರಸ್ತೆಯ ರೇಲ್ವೆ ಬ್ರಿಡ್ಜ್ ಬಳಿ ಕಾಯುತ್ತಿದ್ದನೆನ್ನಲಾಗಿದೆ. ಈ ಬಗ್ಗೆ ಮಾಹಿತಿ ಅರಿತ ಶಹರ ಠಾಣೆ ಇನ್ ಸ್ಪೆಕ್ಟರ್ ರಫೀಕ್ ತಹಶೀಲ್ದಾರ್ ನೇತೃತ್ವದ ಪಿಎಸ್ಸೈ ವಿನೋದರನ್ನು ಒಳಗೊಂಡ ಪೊಲೀಸ್ ತಂಡ ಆತನನ್ನು ಸಿನಿಮೀಯ ಶೈಲಿಯಲ್ಲಿ ಬಂಧಿಸಿತ್ತು.
ಸಂಜೆ ಸತೀಶ ಗೋನಾನನ್ನು ಸ್ಥಳ ಮಹಜರಿಗೆ ಕರೆ ತಂದಾಗ ಆತ ಪೊಲೀಸರ ಮೇಲೆಯೇ ಕಲ್ಲಿನಿಂದ ಹಲ್ಲೆಗೆ ಮುಂದಾಗಿದ್ದಾನೆನ್ನಲಾಗಿದೆ. ಈ ವೇಳೆ ಇನ್ ಸ್ಪೆಕ್ಟರ್ ರಫೀಕ್ ತಹಶೀಲ್ದಾರ್ ಅವರು ಸತೀಶ್ ಕಾಲಿಗೆ ಗುಂಡಿಕ್ಕಿದ್ದಾರೆ. ಗಾಯಗೊಂಡಿರುವ ಆತನನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.