ಚೈತ್ರಾ ವಂಚನೆ ಪ್ರಕರಣದ ಬಗ್ಗೆ ನನಗೆ ಮೊದಲೇ ಗೊತ್ತಿತ್ತು; ಸಿ.ಟಿ.ರವಿ ಗಮನಕ್ಕೂ ತಂದಿದ್ದೆ: ಚಕ್ರವರ್ತಿ ಸೂಲಿಬೆಲೆ
ʼʼಸಿಸಿಬಿ ಕರೆದರೆ ವಿಚಾರಣೆಗೆ ಹೋಗುತ್ತೇನೆʼʼ
ಬೆಂಗಳೂರು: ʼʼಚೈತ್ರಾ ಕುಂದಾಪುರ ವಂಚನೆ ಪ್ರಕರಣದ ಬಗ್ಗೆ ನನಗೆ ಮೂರು ತಿಂಗಳ ಹಿಂದೆಯೋ ಗೊತ್ತಿತ್ತು. ವಂಚನೆಗೊಳಗಾಗಿರುವ ಉದ್ಯಮಿ ಗೋವಿಂದಬಾಬು ಪೂಜಾರಿ ನನಗೆ ತುಂಬಾ ಆತ್ಮೀಯ ಸ್ನೇಹಿತರುʼʼ ಎಂದು ಯುವ ಬ್ರಿಗೇಡ್ ನ ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ.
ಚೈತ್ರಾ ಕುಂದಾಪುರ ಬಂಧನದ ಬೆನ್ನಲ್ಲೇ ಈ ಪ್ರಕರಣದ 3ನೇ ಆರೋಪಿ ಅಭಿನವ ಹಾಲಶ್ರೀ ಜೊತೆಗಿದ್ದ ಸೂಲಿಬೆಲೆ ಅವರ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು.
ಈ ಬಗ್ಗೆ ಮಾದ್ಯಮಗಳಿಗೆ ಪ್ರತಿಕ್ರಿಯಿಸಿದ ಸೂಲಿಬೆಲೆ, ʼʼಹಾಲಾಶ್ರೀ ಸ್ವಾಮೀಜಿ ಜೊತೆ ಸೇರಿದಂತೆ ಅನೇಕ ಸ್ವಾಮೀಜಿಗಳ ಜೊತೆ ನನಗೆ ಸಂಪರ್ಕ ಇದೆ. ಹಾಗಂತ ನನ್ನ ಹೆಸರು ಈ ಪ್ರಕರಣದಲ್ಲಿ ಥಳಕು ಹಾಕೋದು ಬೇಡʼʼ ಎಂದು ಸ್ಪಷ್ಟಪಡಿಸಿದರು.
ʼʼಗೋವಿಂದಬಾಬು ಪೂಜಾರಿ ನನಗೆ ಆತ್ಮೀಯ ಸ್ನೇಹಿತರು. ಅವರು ನನಗೆ ಈ ವಿಚಾರ ತಿಳಿಸಿದಾಗ ನಾನು ಆಘಾತಕ್ಕೊಳಗಾಗಿದ್ದೆ, ಅವರು ಮೋಸ ಹೋಗಿದ್ದಕ್ಕೆ ನನಗೆ ಬೇಸರವಿದೆ. ಈ ವಿಚಾರವನ್ನು ನಾನು ಈ ಹಿಂದೆಯೇ ಸಿ.ಟಿ.ರವಿ ಗಮನಕ್ಕೂ ತಂದಿದ್ದೆ. ಬಿಜೆಪಿಯಲ್ಲಿ ಈ ರೀತಿ ನಡೆಯಲ್ಲವೆಂದು ಜನರಿಗೆ ಗೊತ್ತಾಗಬೇಕು. ಗೊತ್ತಾಗೋದರಲ್ಲಿ ತಪ್ಪಿಲ್ಲ ಎಂದು ಬಿಜೆಪಿ ನಾಯಕ ಸಿ.ಟಿ.ರವಿ ಹೇಳಿದ್ದರುʼʼ ಎಂದು ಅವರು ತಿಳಿಸಿದರು.
ʼʼಚೈತ್ರಾ ಕುಂದಾಪುರ ಅವರನ್ನು ಸುಮಾರು 10 ವರ್ಷಗಳ ಹಿಂದೆ ನೋಡಿದ್ದೆ. ನನ್ನ ಮತ್ತು ಅವರ ಮಧ್ಯೆ ಬೇರೆ ಯಾವುದೇ ಹಣದ ವ್ಯವಹಾರ ಇಲ್ಲ. ವಂಚನೆ ಪ್ರಕರಣದಲ್ಲಿ ನನ್ನ ಹೆಸರು ಬಂದಿದ್ದಕ್ಕೆ ಬೇಸರವಿಲ್ಲ. ಸಿಸಿಬಿ ಕರೆದರೆ ವಿಚಾರಣೆಗೆ ಹೋಗುತ್ತೇನೆ, ಮಾಹಿತಿ ಕೇಳಿದರೆ ನೀಡುತ್ತೇನೆʼʼ ಎಂದು ತಿಳಿಸಿದರು.