ನಾನೇ ವಿರೋಧ ಪಕ್ಷದ ನಾಯಕ, ಬಿಜೆಪಿ ಅಧ್ಯಕ್ಷನೂ ನಾನೇ: ಶಾಸಕ ಯತ್ನಾಳ್
ಮುರುಗೇಶ ನಿರಾಣಿಯನ್ನು ‘ಬೀದಿ ನಾಯಿ’ ಎಂದ ಬಿಜೆಪಿ ಮುಖಂಡ
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್
ವಿಜಯಪುರ: ಮಾಜಿ ಸಚಿವ ಮುರುಗೇಶ ಆರ್.ನಿರಾಣಿ ವಿರುದ್ಧ ವಿಜಯಪುರ ನಗರ ಕ್ಷೇತ್ರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದ್ದು, ಅವರನ್ನು ‘ಬೀದಿ ನಾಯಿ, ಹಂದಿ’ ಎಂದು ಜರಿದಿದ್ದಾರೆ.
ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಲೇ ನಿರಾಣಿ ವಿರುದ್ಧ ವಾಗ್ದಾಳಿ ನಡೆಸಿದ ಯತ್ನಾಳ್, ಕೆಲವೊಂದು ಬೀದಿ ನಾಯಿಗಳ ಬಗ್ಗೆ ನಾನು ಉತ್ತರ ಕೊಡಲ್ಲ, ಹಂದಿಗಳು ಹಾಗೇ ಒದರುತ್ತಾ ಹೋಗುತ್ತವೆ, ಹಂದಿಗಳ ಬಗ್ಗೆ ನೀವೆಲ್ಲ ಕೇಳಬೇಡಿ ಎಂದು ಹೇಳಿದರು.
ಅಲ್ಲಲ್ಲಿ ಕೆಲವೊಂದು ಹಂದಿಗಳನ್ನು ವಿಜಯೇಂದ್ರ ಬಿಟ್ಟಿದ್ದಾನೆ, ಅವು ಮಾತನಾಡುತ್ತವೆ, ನನ್ನ ಬಗ್ಗೆ ವಿರೋಧವಾಗಿ ಮಾತನಾಡಲು ಕೆಲವರನ್ನು ವಿಜಯೇಂದ್ರ ಬಿಟ್ಟಿದ್ದಾನೆಂದು ನೇರವಾಗಿ ಯತ್ನಾಳ್ ಆರೋಪ ಮಾಡಿದ್ದಾರೆ.
ವಿರೋಧ ಪಕ್ಷದ ನಾಯಕ ನಾನೇ, ಬಿಜೆಪಿ ಅಧ್ಯಕ್ಷನೂ ನಾನೇ ಆಗಿದ್ದೇನೆ. ಬೆಳಗಾವಿ ಅಧಿವೇಶನದಲ್ಲಿ ಹೆಚ್ಚು ಸಕ್ರಿಯ ಆಗಿದ್ದು ನಾನೇ. ಉತ್ತರ ಕರ್ನಾಟಕದಲ್ಲೂ ಸಮರ್ಥ ನಾಯಕರಿದ್ದಾರೆ ಎಂಬುದನ್ನು ನಾನು ತೋರಿಸಿದ್ದೇನೆಂದು ಬಸನಗೌಡ ಪಾಟೀಲ್ ಯುತ್ನಾಳ್ ಹೇಳಿದರು.
ಬೆಳಗಾವಿಯಲ್ಲಿ ಮಹಿಳೆ ಬೆತ್ತಲೆ ಪ್ರಕರಣ ಇದು ದೊಡ್ಡ ದುರಂತ, ಉತ್ತರ ಪ್ರದೇಶದಲ್ಲಿಯೂ ದಲಿತ ಮಹಿಳೆ ಮೇಲೆ ಅಮಾನುಷ ಕೃತ್ಯವಾಗಿತ್ತು, ಇಲ್ಲಿಯೂ ಅದೇ ರೀತಿ ಘಟನೆ ನಡೆದಿದೆ. ರಾಜ್ಯದ ಮುಖಂಡರು ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ, ಶುಕ್ರವಾರ ನಡ್ಡಾ ಕರೆ ಮಾಡಿದಾಗ ಎಚ್ಚೆತ್ತರು, ನನಗೆ 6-30ಕ್ಕೆ ಕರೆ ಮಾಡಿ ಎಲ್ಲಿದ್ದೀರಾ? ಎಂದು ವಿರೋಧ ಪಕ್ಷದ ನಾಯಕರು ಕರೆ ಮಾಡಿದ್ದಾರೆ, ಎರಡು ವಿಷಯದಲ್ಲಿ ನಮ್ಮವರು ಸರಿಯಾಗಿ ಹೋರಾಟ ಮಾಡಬೇಕೆಂಬ ಆದೇಶವಿತ್ತು, ಒಂದು ಬೆಳಗಾವಿಯ ಮಹಿಳೆ ಬೆತ್ತಲೆ ಪ್ರಕರಣ, ಮತ್ತೊಂದು ಡಿಕೆಶಿ ಭ್ರಷ್ಟಾಚಾರ ಪ್ರಕರಣ, ಈ ಕುರಿತು ನಮ್ಮವರು ಉಗ್ರ ಹೋರಾಟ ಮಾಡೋದಾಗಿ ಜೋಡೆತ್ತುಗಳು ಹೇಳಿದ್ದವು ಎಂದು ಹೇಳಿದರು.