ನಾನು ದೇವರಾಜ ಅರಸು ಆಗಲು ಸಾಧ್ಯವಿಲ್ಲ: ಸಿಎಂ ಸಿದ್ದರಾಮಯ್ಯ
ಸಂಗ್ರಹ ಚಿತ್ರ
ಬೆಂಗಳೂರು, ಸೆ.17: ನನ್ನನ್ನು ಎಲ್ಲರೂ ಎರಡನೇ ದೇವರಾಜ ಅರಸು ಅಂತಾರೆ. ಆದರೆ, ದೇವರಾಜ ಅರಸು, ದೇವರಾಜ ಅರಸುನೇ ಸಿದ್ದರಾಮಯ್ಯ ಸಿದ್ದರಾಮಯ್ಯನೇ. ನಾನು ದೇವರಾಜ ಅರಸು ಆಗಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದಿದ್ದಾರೆ.
ರವಿವಾರ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅರಸು, ಇಂದಿರಾಗಾಂಧಿ, ನೆಹರೂ ಎಲ್ಲರೂ ಭಿನ್ನವಾಗಿದ್ದರು. ಆದರೆ ಇವರೆಲ್ಲರ ಸಾಮಾಜಿಕ ಕೊಡುಗೆಗಳು ಅಪಾರ. ಯಾರ ಕೊಡುಗೆಗಳನ್ನೂ ಅಲ್ಲಗಳೆಯಲಾಗದು. ಒಬ್ಬರು ಇನ್ನೊಬ್ಬರಾಗಲು ಸಾಧ್ಯವಿಲ್ಲ. ಹಾಗೆಯೇ ನಾನು ದೇವರಾಜ ಅರಸು ಆಗಲು ಸಾಧ್ಯವಿಲ್ಲ ಎಂದರು.
ನಾವು ರೂಪಿಸುವ ಕಾಳಜಿ ಮತ್ತು ಕಾರ್ಯಕ್ರಮಗಳಲ್ಲಿ ಸಾಮಾಜಿಕ ನ್ಯಾಯ ಇರುತ್ತದೆ. ಎಲ್ಲಾ ಹಿಂದುಳಿದ ಜಾತಿ, ಸಮುದಾಯಗಳು ಸಮಾನ ಅವಕಾಶಗಳನ್ನು ಪಡೆದುಕೊಂಡು ಮುಂದುವರೆದಾಗ ಮಾತ್ರ ಇಡೀ ಸಮಾಜ ಮುಂದುವರೆಯುತ್ತದೆ. ಕೆಲವೇ ಜಾತಿ-ಸಮುದಾಯಗಳು ಅವಕಾಶಗಳನ್ನು ಪಡೆದುಕೊಂಡು ಉಳಿದವುಗಳು ಅವಕಾಶ ವಂಚಿತರಾಗುತ್ತಿದ್ದರೆ ಅದನ್ನು ಪ್ರಗತಿ ಪಥದಲ್ಲಿರುವ ಸಮಾಜ ಎಂದು ಕರೆಯಲು ಸಾಧ್ಯವಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.
ಬಿಂಬಾರಾಯ್ಕರ್, ರಘು ಆಚಾರ್ಯ ಸೇರಿ ವಿಶ್ವಕರ್ಮ ಸಮುದಾಯದ ಹಲವರಿಗೆ ರಾಜಕೀಯ ಪ್ರಾತಿನಿಧ್ಯ ಮತ್ತು ಅಧಿಕಾರವನ್ನು ಒದಗಿಸಿಕೊಟ್ಟಿದೆ. ರಘು ಆಚಾರ್ಯ ದುಡುಕಿ ನಮ್ಮನ್ನೆಲ್ಲಾ ಬಿಟ್ಟು ಕಾಂಗ್ರೆಸ್ ತೊರೆದರು. ನಾನು ಎಷ್ಟು ಹೇಳಿದರೂ ಕೇಳಲಿಲ್ಲ ಎಂದು ಸಿದ್ದರಾಮಯ್ಯ ತಿಳಿಸಿದರು.
ಕಾಂಗ್ರೆಸ್ ಪ್ರತಿಯೊಂದು ಜಾತಿ, ಸಮುದಾಯಗಳಿಗೂ ಅವಕಾಶ ಮತ್ತು ಅಧಿಕಾರವನ್ನು ನಿರಂತರವಾಗಿ ಒದಗಿಸುತ್ತಲೇ ಬಂದಿದೆ. ಆ ಮೂಲಕ ಹಿಂದುಳಿದ ಸಮುದಾಯಗಳಿಗೆ, ದಲಿತ ಸಮುದಾಯಗಳಿಗೂ ಶಕ್ತಿ ತುಂಬುತ್ತಿದೆ. ಒಂದು ಕೋಟಿ ರೂಪಾಯಿವರೆಗಿನ ಕಾಂಟ್ರಾಕ್ಟ್ ಕೆಲಸಗಳಿಗೆ ಮೀಸಲಾತಿ ಒದಗಿಸಿದ್ದು ನಾವೆ ಎಂದು ಸಿದ್ದರಾಮಯ್ಯ ಹೇಳಿದರು.
ವಿಶ್ವಕರ್ಮ ಸಮುದಾಯದ ಮಕ್ಕಳಿಗೆ ಶಾಲೆ, ಹಾಸ್ಟೆಲ್ಗಳನ್ನು ನಿರ್ಮಿಸುವ ಕಾರಣಕ್ಕೆ ಸರಕಾರದಿಂದ ಜಾಗ ಕೇಳಿದ್ದೀರಿ. ಎಲ್ಲಾ ಸಮುದಾಯಗಳೂ ಜಾಗ ಪಡೆದುಕೊಂಡಿವೆ. ನೀವೂ ಪಡೆದುಕೊಳ್ಳಿ. ನಮ್ಮ ಸರಕಾರ ನಿಮಗೂ ಜಾಗ ಒದಗಿಸುತ್ತದೆ ಮಕ್ಕಳನ್ನು ಹೆಚ್ಚೆಚ್ಚು ಶಿಕ್ಷಿತರನ್ನಾಗಿ ಮಾಡಿ ಎಂದು ಅವರು ಹಾರೈಸಿದರು.
ಕಾರ್ಯಕ್ರಮದಲ್ಲಿ ಮಧುಗಿರಿ ನಿಟ್ಟರಹಳ್ಳಿ ಅಭಯಹಸ್ತೆ ಆದಿಲಕ್ಷ್ಮೀ ಸಂಸ್ಥಾನ ಮತ್ತು ವಿಶ್ವಕರ್ಮ ಸಂಪನ್ಮೂಲ ಮಠದ ಡಾ.ನೀಲಕಂಠಚಾರ್ಯ ಸ್ವಾಮೀಜಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಸೇರಿ ಹಲವರು ಉಪಸ್ಥಿತರಿದ್ದರು.