ನಾನು ಸವಾಲು ಹಾಕುತ್ತೇನೆ, ಪ್ರಧಾನಿ ಮೋದಿ ಮಲಗಿದ್ದರೆ ದಾಖಲೆ ಕೊಡಿ: ವಿಪಕ್ಷ ನಾಯಕ ಆರ್.ಅಶೋಕ್
ಬೆಂಗಳೂರು: ನಾನು ಸವಾಲು ಹಾಕುತ್ತೇನೆ ಪ್ರಧಾನಿ ನರೇಂದ್ರ ಮೋದಿ ಕೆಲಸದ ವೇಳೆಯಲ್ಲಿ ಮಲಗಿರುವ ದಾಖಲೆ ಕೊಡಿ. ಆದರೆ, ನಾವು ಮುಖ್ಯಮಂತ್ರಿ ಸಿದ್ದರಾಮಯ್ಯ ಮಲಗಿರುವ ಸಾಕ್ಷಿ ಕೊಡುತ್ತೇವೆ ಎಂದು ವಿಧಾನಸಭೆಯ ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ.
ಬುಧವಾರ ತಮ್ಮ ನಿವಾಸದಲ್ಲಿ ಸುದ್ದಿಗಾರರೊಮದಿಗೆ ಮಾತನಾಡಿದ ಅವರು, ಪ್ರಧಾನಿ ಮೋದಿ ಹೆಚ್ಚು ಕಾಲ ಕೆಲಸ ಮಾಡಿದ್ದಾರೆ. ನೀವು ಐದು ಗಂಟೆಯೂ ಕೆಲಸ ಮಾಡಲ್ಲ, ಅಭಿವೃದ್ಧಿಯೂ ಮಾಡಲಾಗುತ್ತಿಲ್ಲ. ಅಲ್ಲದೆ, ಮೋದಿಯನ್ನು ಟೀಕಿಸುವ ಇವರಿಗೆ ನಿದ್ದೆ ಮಾಡುವವರ ರಾಯಭಾರಿ ಎಂದು ಕರೆಯಲಾಗುತ್ತಿದೆ ಎಂದು ಟೀಕಿಸಿದರು.
ಮುಂಬರಲಿರುವ ಲೋಕಸಭಾ ಚುನಾವಣಾ ಸಿದ್ಧತಾ ಕಾರ್ಯಗಳ ಕುರಿತು ಕೇಂದ್ರದ ವರಿಷ್ಠರ ಜೊತೆ ಮಾತುಕತೆ ನಡೆಸಿದ್ದು, ಆದಷ್ಟು ಬೇಗ ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಡುವೆ ಸ್ಥಾನಗಳ ಹಂಚಿಕೆ ಕಾರ್ಯ ಮುಗಿಯಲಿದೆ. ಈ ಸಂಬಂಧ ಈಗಾಗಲೇ ವರಿಷ್ಠರ ಜೊತೆ ಸಭೆ ನಡೆಸಲಾಗಿದ್ದು, ಲೋಕಸಭಾ ಚುನಾವಣೆ ಗೆಲ್ಲುವ ವಿಚಾರ ಚರ್ಚೆಯಾಗಿದೆ. ಕೇಂದ್ರದ ಯೋಜನೆಗಳನ್ನು ಮನೆ ಬಾಗಿಲಿಗೆ ಮುಟ್ಟಿಸುವ ಬಗ್ಗೆ ಚರ್ಚೆಯಾಯಿತು ಎಂದರು.
ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲುವ ಕುರಿತು ಅನುಸರಿಸಬೇಕಾದ ಕಾರ್ಯತಂತ್ರಗಳ ಕುರಿತು ಒಂದಷ್ಟು ಚರ್ಚೆಯಾಗಿದೆ. ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲುವ ನಿಟ್ಟಿನಲ್ಲಿ ನಾನೂ ಕೆಲವು ಮನವಿ ಮಾಡಿದ್ದೇನೆ. ವರಿಷ್ಠರು ಸಹ ಮೈತ್ರಿ ಬಗ್ಗೆ ಕೆಲವು ತೀರ್ಮಾನಗಳನ್ನು ಮಾಡಿದ್ದಾರೆ. ಕೇಂದ್ರದ ನಾಯಕರು ಜೆಡಿಎಸ್ ಜೊತೆ ಸೀಟು ಹಂಚಿಕೆ ಕುರಿತು ಶೀಘ್ರವೇ ನಿರ್ಧಾರ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು.