ನಾನು ಯಾವತ್ತಿಗೂ ಬಸವವಾದಿ ಶರಣರ ಅನುಯಾಯಿ: ಮುಖ್ಯಮಂತ್ರಿ ಸಿದ್ದರಾಮಯ್ಯ
Photo: X/@siddaramaiah
ವಿಜಯಪುರ: ‘ಜ್ಞಾನಯೋಗಿ ಸಿದ್ದೇಶ್ವರ ಸ್ವಾಮೀಜಿಯವರ ಬದುಕೇ ನಮಗೆ ಆದರ್ಶ. ಅವರ ಜೀವನದ ಆಶಯದಂತೆ ಬದುಕುವುದೇ ಅವರಿಗೆ ಸಲ್ಲಿಸುವ ದೊಡ್ಡ ಗೌರವ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮಂಗಳವಾರ ವಿಜಯಪುರದ ಜ್ಞಾನಯೋಗಾಶ್ರಮದಲ್ಲಿ ಸಿದ್ದೇಶ್ವರ ಸ್ವಾಮೀಜಿ ಗುರುನಮನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ನಾನು ಇವತ್ತಿಗೂ-ಯಾವತ್ತಿಗೂ ಬಸವವಾದಿ ಶರಣರ ಅನುಯಾಯಿ. ಸಿದ್ದೇಶ್ವರ ಸ್ವಾಮಿ ಬಸವಣ್ಣನವರ ರೀತಿಯಲ್ಲೇ ಜಾತಿ ಮತ್ತು ವರ್ಗ ರಹಿತ ಸಮ ಸಮಾಜಕ್ಕಾಗಿ ಶ್ರಮಿಸಿದವರು’ ಎಂದು ಸ್ಮರಿಸಿದರು.
‘ಸಿದ್ದೇಶ್ವರ ಸ್ವಾಮಿ ಜ್ಞಾನ ಸಂಪಾದಿಸಿದರು. ಆ ಜ್ಞಾನವನ್ನು ಜನಮಾನಸಕ್ಕೆ ಹಂಚಿದರು. ದ್ವೇಷ, ಅಹಂಕಾರದಿಂದ ಬಿಡುಗಡೆ ಹೊಂದಿದ ಅತ್ಯುನ್ನತ ಮನುಷ್ಯತ್ವದ ಸೃಷ್ಟಿಗೆ ಶ್ರಮಿಸಿದವರು. ಇವರ ಬದುಕು ಮತ್ತು ಸಾಧನೆಯನ್ನು ವರ್ಣಿಸಲು ಪದಗಳೇ ಇಲ್ಲ. ಅಷ್ಟು ಸರಳತೆ ಅವರ ಬದುಕು ಮತ್ತು ವ್ಯಕ್ತಿತ್ವದಲ್ಲಿ ಬೆರೆತಿತ್ತು’ ಎಂದು ಸಿದ್ದರಾಮಯ್ಯ ವಿವರಿಸಿದರು.
‘ಧರ್ಮಾತೀತವಾಗಿ ಪ್ರತಿಯೊಬ್ಬರೂ ಬಾಳಬೇಕು ಎನ್ನುವುದು ಸಿದ್ದೇಶ್ವರ ಸ್ವಾಮಿ ಆಶಯವಾಗಿತ್ತು. ಸಮಾಜದ ಜಾತಿಯ ಮೈಲಿಗೆಯನ್ನು ಸೋಕಿಸಿಕೊಳ್ಳದೆ ದೂರ ಉಳಿದಿದ್ದ ದಾರ್ಶಕನಿಕರು. ಸಮಾಜದಲ್ಲಿ ದೂರದರ್ಶಿತ್ವ ಇಟ್ಟುಕೊಂಡು ಮನುಷ್ಯ ಸಮಾಜವನ್ನು ತಿದ್ದುವ ಗುರಿ ಹೊಂದಿದ್ದ ಕಾರಣಕ್ಕೇ ಇವರು ದಾರ್ಶನಿಕರಾಗಿದ್ದರು’ ಎಂದು ಅವರು ನುಡಿದರು.
‘ಜಿಲ್ಲೆಯ ಸಚಿವರು ಮತ್ತು ಸಂತರು ಹೇಳಿದ ರೀತಿಯಲ್ಲಿ ಸಿದ್ದೇಶ್ವರ ಶ್ರೀಗಳ ಬದುಕಿನ ಸಂದೇಶ ಮತ್ತು ಆದರ್ಶಗಳನ್ನು ಕಾಪಾಡುವ ಸ್ಮರಣಾರ್ಥ ಕಾರ್ಯ ಮಾಡಲು ಸರಕಾರ ಸಿದ್ದವಿದೆ. ಸಿದ್ದೇಶ್ವರ ಸ್ವಾಮಿಗೆ ಗುರುನಮನ ಸಲ್ಲಿಸುವುದಕ್ಕಾಗಿಯೇ ನಾನು ಇಲ್ಲಿಗೆ ಬಂದಿದ್ದೇನೆ. ಸಿದ್ದೇಶ್ವರ ಸ್ವಾಮಿ ಬಗ್ಗೆ ನನಗೆ ವಿಶೇಷ ಗೌರವ ಮತ್ತು ಪ್ರೀತಿ’ ಎಂದು ಅವರು ತಿಳಿಸಿದರು.
ಈ ವೇಳೆ ಸಿದ್ದಗಿರಿ ಕನ್ನೇರಿಮಠ ಕೊಲ್ಲಾಪುರದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮಿ, ಸಿರಿಗೆರೆಯ ಸುತ್ತೂರು ಮಠದ ಶಿವರಾತ್ರಿ ದೇಶೀಕೇಂದ್ರ ಸ್ವಾಮಿ, ಶಿವಮೂರ್ತಿ ಶಿವಾಚಾರ್ಯ ಶ್ರೀಗಳು, ಜ್ಞಾನಯೋಗಾಶ್ರಮದ ಬಸವಲಿಂಗ ಸಾಮಿ, ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ್ ಮತ್ತು ಸಚಿವರಾದ ಎಚ್.ಕೆ.ಪಾಟೀಲ್, ಶಿವಾನಂದ ಪಾಟೀಲ್, ಶಾಸಕರಾದ ವಿನಯ್ ಕುಲಕರ್ಣಿ, ಸಿ.ಎಸ್.ನಾಡಗೌಡ, ಅಶೋಕ್ ಮನಗೋಳಿ ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು.