ನಾನು ಸನಾತನ ಧರ್ಮದ ಬಗ್ಗೆ ಮಾತಾಡಿಲ್ಲ: ಗೃಹ ಸಚಿವ ಜಿ ಪರಮೇಶ್ವರ್
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಜನರೇ ಉತ್ತರ ಕೊಡುತ್ತಾರೆ
ಹುಬ್ಬಳ್ಳಿ: ನಾನು ಸನಾತನ ಧರ್ಮದ ಬಗ್ಗೆ ಮಾತಾಡಿಲ್ಲ. ಬೇರೆಯವರು ಏನೆಲ್ಲಾ ವಿಶ್ಲೇಷಣೆ ಮಾಡ್ತಾರೆ. ಅದಕ್ಕೆಲ್ಲ ಉತ್ತರ ಕೊಡಲ್ಲ. ನಾನು ಸಮಯ ಸಂದರ್ಭದಲ್ಲಿ ಏನ ಹೇಳಬೇಕೋ ಅದನ್ನು ಹೇಳಿದ್ದೇನೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ಅವರು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಅಭಿಪ್ರಾಯ ಹೇಳಿದ್ದೇನೆ. ಯಾರು ಏನು ಬೇಕಾದರೂ ವಿಶ್ಲೇಷಣೆ ಮಾಡಲಿ. ಅವರ ಹಾಗೆ ಮಾತಾಡ್ತಾರೆ ಹೀಗೆ ಮಾತಾಡ್ತಾರೆ ಅಂದ್ರೆ ನಾನು ಉತ್ತರ ಕೊಡಲ್ಲ. ಮೋದಿ ಅವರು ನಾನು ಹೇಳಿರೋ ಹೇಳಿಕೆ ಬಗ್ಗೆ ಮಾತಾಡಿಲ್ಲ. ಸನಾತನ ಧರ್ಮದ ವಿಚಾರವಾಗಿ ಮಾತಾಡಿದ್ದಾರೆ ಎಂದರು.
ಬಿಜೆಪಿಯವರು ಹೋರಾಟ ಮಾಡಲಿ. ನಾವು ಉತ್ತರ ಕೊಡುತ್ತೇವೆ. ಈಗಾಗಲೇ ಜನ ಉತ್ತರ ಕೊಟ್ಟಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಜನ ಉತ್ತರ ಕೊಡ್ತಾರೆ ಎಂದರು.
ಬರಗಾಲದ ಬಗ್ಗೆ ಕ್ಯಾಬಿನೆಟ್ ನಲ್ಲಿ ಚರ್ಚೆಯಾಗಿದೆ. ಸಚಿವ ಸಂಪುಟ ಉಪ ಸಮಿತಿಯು ಕೆಲವು ತಾಲೂಕುಗಳನ್ನು ಮಾತ್ರ ಬರ ಪೀಡಿತವೆಂದು ಘೋಷಿಸಲು ಶಿಫಾರಸ್ಸು ಮಾಡಿದೆ. ಇನ್ನುಳಿದ ತಾಲೂಕುಗಳ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗುವುದು. ಸದ್ಯದಲ್ಲೇ ಕೇಂದ್ರ ಸರ್ಕಾರಕ್ಕೆ ವರದಿ ನೀಡಲಿದ್ದೇವೆಎಂದು ತಿಳಿಸಿದರು.
ಕಾನೂನಿಗೆ ವಿರುದ್ಧವಾಗಿ ಕೆಲಸ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ದೇಶದಲ್ಲಿ ಎಲ್ಲರಿಗೂ ಒಂದೇ ಕಾನೂನು ಇದೆ. ಬಿಜೆಪಿಯವರಿಗೆ ಬೇರೆ ಇದೆಯಾ ಎಂದು ಅವರು ಪ್ರಶ್ನಿಸಿದರು.