ಯಡಿಯೂರಪ್ಪ ಅವಧಿಯ ಕೋವಿಡ್ ಹಗರಣದ ಬಗ್ಗೆ ವರಿಷ್ಠರಿಗೆ ಮಾಹಿತಿ ನೀಡಿದ್ದೇನೆ: ಬಿಜೆಪಿ ಶಾಸಕ ಯತ್ನಾಳ್
ಬೆಂಗಳೂರು: ‘ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರನ್ನು ದಿಲ್ಲಿಯಲ್ಲಿ ಭೇಟಿ ಮಾಡಿದ್ದು, ರಾಜ್ಯದಲ್ಲಿನ ಹೊಂದಾಣಿಕೆ ರಾಜಕೀಯದ ಬಗ್ಗೆ ವರಿಷ್ಠರಿಗೆ ಮನವರಿಕೆ ಮಾಡಿಕೊಟ್ಟಿದ್ದೇನೆ’ ಎಂದು ವಿಜಯಪುರ ನಗರ ಕ್ಷೇತ್ರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದ್ದಾರೆ.
ಸೋಮವಾರ ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ನಡೆದ ಕೋವಿಡ್ ಹಗರಣದ ಬಗ್ಗೆಯೂ ಹೈಕಮಾಂಡ್ ನಾಯಕರಿಗೆ ತಿಳಿಸಿದ್ದೇನೆ. ಹೊಸದಿಲ್ಲಿಯ ಭೇಟಿ ಅತ್ಯಂತ ಯಶಸ್ವಿಯಾಗಿದೆ ಎಂದು ವಿವರಣೆ ನೀಡಿದರು.
‘ನಾನು ಪಕ್ಷದ ಕೆಲವರ ವಿರುದ್ಧ ಬಹಿರಂಗವಾಗಿ ಮಾಡಿದ ಆರೋಪ ಸಂಬಂಧಿಸಿದಂತೆ ವರಿಷ್ಠರು ನನಗೆ ಯಾವುದೇ ಎಚ್ಚರಿಕೆಯನ್ನು ನೀಡಿಲ್ಲ. ನಡ್ಡಾ ಮತ್ತು ಶಾ ಅವರು ಅತ್ಯಂತ ಗೌರವಯುತವಾಗಿ ನನ್ನ ಮಾತುಗಳನ್ನು ಕೇಳಿಸಿಕೊಂಡಿದ್ದು, ಭ್ರಷ್ಟಾಚಾರದ ವಿರುದ್ಧ ನನ್ನ ಹೋರಾಟದಲ್ಲಿ ಯಾವುದೇ ರಾಜೀ ಇಲ್ಲ' ಎಂದು ಯತ್ನಾಳ್ ಸ್ಪಷ್ಟಪಡಿಸಿದರು.
ಭವಿಷ್ಯದಲ್ಲಿ ಬದಲಾವಣೆ: ರಾಜ್ಯ ಬಿಜೆಪಿಯಲ್ಲಿ ಮುಂಬರುವ ದಿನಗಳಲ್ಲಿ ಬದಲಾವಣೆ ಬಗ್ಗೆಯೂ ವರಿಷ್ಠರು ತಿಳಿಸಿದ್ದಾರೆ. ಆದರೆ, ವಿಜಯೇಂದ್ರ ಜಾಲತಾಣದ ಮೂಲಕ ಯತ್ನಾಳ್‍ಗೆ ವರಿಷ್ಠರಿಂದ ಶಿಸ್ತು ಕ್ರಮದ ಎಚ್ಚರಿಕೆ, ಪಕ್ಷದಿಂದ ಉಚ್ಛಾಟಿಸುವುದಾಗಿ ಸೂಚನೆ ಎಂದು ಸುಳ್ಳು ಸುದ್ದಿ ಹರಿಬಿಡುತ್ತಿದ್ದಾರೆ ಎಂದು ಯತ್ನಾಳ್ ಇದೇ ವೇಳೆ ದೂರಿದರು.
ಬಿಜೆಪಿ ಸೇರುವ ವೇಳೆ ರಾಜ್ಯದ ಯಾವೊಬ್ಬ ಬಿಜೆಪಿ ನಾಯಕರು ನನ್ನನ್ನು ಸೇರಿಸಿಕೊಂಡಿರಲಿಲ್ಲ, ಯಡಿಯೂರಪ್ಪ, ಸದಾನಂದಗೌಡ ಸೇರಿದಂತೆ ಯಾರ ಉಪಕಾರವೂ ಇಲ್ಲ. ಅಂದಿನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಅಮಿತ್ ಶಾ ಅವರೇ ನೇರವಾಗಿ ನನ್ನೊಂದಿಗೆ ಮಾತನಾಡಿ ಪಕ್ಷಕ್ಕೆ ಮರು ಸೇರ್ಪಡೆ ಮಾಡಿಕೊಂಡಿದ್ದರು ಎಂದು ಯತ್ನಾಳ್ ತಿಳಿಸಿದರು.
ಮುಸ್ಲಿಮರ ವ್ಯಾಪಾರಕ್ಕೆ ನಿರ್ಬಂಧವಿಲ್ಲ: ಜ.12ರಿಂದ 18ರ ವರೆಗೆ ವಿಜಯಪುರ ನಗರದಲ್ಲಿ ನಡೆಯಲಿರುವ ಸಿದ್ದೇಶ್ವರ ಜಾತ್ರೆಯಲ್ಲಿ ವ್ಯಾಪಾರ, ವಹಿವಾಟಿಗೆ ಹಿಂದೂಗಳಿಗೆ ಅವಕಾಶ ನೀಡಲಾಗುವುದು. ಆದರೆ, ಜಾತ್ರೆಯಲ್ಲಿ ಮುಸ್ಲಿಮ್ ಸಮುದಾಯದವರು ವ್ಯಾಪಾರ ನಡೆಸಲು ಯಾವುದೇ ನಿರ್ಬಂಧವಿಲ್ಲ ಎಂದು ಸಿದ್ದೇಶ್ವರ ಸಂಸ್ಥೆಯ ಅಧ್ಯಕ್ಷರೂ ಆಗಿರುವ ಶಾಸಕ ಯತ್ನಾಳ್ ಇದೇ ವೇಳೆ ಸ್ಪಷ್ಟಪಡಿಸಿದರು.