ಅಪ್ಪನ ಹೆಗಲ ಮೇಲೆ ಕುಳಿತು ದಸರಾ ನೋಡುತ್ತಿದ್ದೆ: ಬಾಲ್ಯದ ದಿನಗಳನ್ನು ನೆನಪಿಸಿಕೊಂಡ ಸಿಎಂ
ಬೆಂಗಳೂರು, ಅ. 11: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಮಾಜ ಕಲ್ಯಾಣ ಇಲಾಖೆಯ ಸಚಿವರೂ ಆಗಿರುವ ಮೈಸೂರು ಜಿಲ್ಲಾ ಉಸ್ತುವಾರಿ ಡಾ.ಎಚ್.ಸಿ.ಮಹದೇವಪ್ಪ ಅವರು ‘ದಸರಾ ಉತ್ಸವ’ಕ್ಕೆ ಆಹ್ವಾನ ನೀಡಿದರು.
ಬುಧವಾರ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ನೇತೃತ್ವದ ಜಿಲ್ಲಾಡಳಿತದ ನಿಯೋಗ ಸಿಎಂ ಸಿದ್ದರಾಮಯ್ಯ ಅವರಿಗೆ ಸಂಪ್ರದಾಯಿಕವಾಗಿ ಆಹ್ವಾನ ನೀಡಿತು. ಈ ವೇಳೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ದಸರಾ ನನ್ನೂರ ಹಬ್ಬ, ನಾನು ಬಾಲ್ಯದಲ್ಲಿ ಅಪ್ಪನ ಹೆಗಲ ಮೇಲೆ ಕುಳಿತು ದಸರಾ ನೋಡುತ್ತಿದ್ದ ನನಗೆ ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ದಸರಾದಲ್ಲಿ ಪಾಲ್ಗೊಳ್ಳುವ ಅವಕಾಶ ಸಿಕ್ಕಿದ್ದು ಸೌಭಾಗ್ಯ’ ಎಂದು ತಮ್ಮ ಹಿಂದಿನ ನೆನಪುಗಳನ್ನು ಸ್ಮರಿಸಿದರು.
ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಮಹದೇವಪ್ಪ ನೇತೃತ್ವದ ನಿಯೋಗವು ವಿಶ್ವ ವಿಖ್ಯಾತ ದಸರಾ ಆಹ್ವಾನ ಪತ್ರಿಕೆ ನೀಡಿದ್ದು, ಅತ್ಯಂತ ಸಂತೋಷದಿಂದ ದಸರಾದಲ್ಲಿ ಭಾಗವಹಿಸಲು ಅವರು ನೀಡಿದ ಆಹ್ವಾನ ಪತ್ರಿಕೆಯನ್ನು ಸಂತೋಷದಿಂದ ಸ್ವೀಕರಿಸಿದ್ದೇನೆ. ಅಲ್ಲದೆ, ದಸರಾಕ್ಕೆ ಆಗಮಿಸುವುದಾಗಿ ತಿಳಿಸಿದ್ದೇನೆ ಎಂದು ಹೇಳಿದರು.
ಡಾ.ಮಹದೇವಪ್ಪ ನೇತೃತ್ವದ ನಿಯೋಗದಲ್ಲಿ ಮೈಸೂರು ಮಹಾನಗರ ಪಾಲಿಕೆ ಮೇಯರ್ ಶಿವಕುಮಾರ್, ಶಾಸಕರಾದ ರವಿಶಂಕರ್, ಎ.ಆರ್.ಕೃಷ್ಣಮೂರ್ತಿ, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಜಿ.ಪಂ. ಸಿಇಒ ಕೆ.ಎಂ.ಗಾಯಿತ್ರಿ, ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್, ಅಪರ ಜಿಲ್ಲಾಧಿಕಾರಿ ಪಿ.ಶಿವರಾಜು ಸೇರಿದಂತೆ ಹಲವು ಪ್ರಮುಖರು ಇದ್ದರು.