ಸನಾತನ ಧರ್ಮಕ್ಕೆ ಹುಟ್ಟಿಲ್ಲ; ಅಮ್ಮ, ಅಪ್ಪನಿಗೆ ಹುಟ್ಟಿದ್ದೇನೆ: ನಟ ಪ್ರಕಾಶ್ ರಾಜ್
ಬೆಂಗಳೂರು, ಸೆ.5: ನಾನು ಸನಾತನ ಧರ್ಮಕ್ಕೆ ಹುಟ್ಟಿಲ್ಲ, ನನ್ನ ಅಮ್ಮ, ಅಪ್ಪನಿಗೆ ಹುಟ್ಟಿದ್ದೇನೆ.ಇದು ನನ್ನನ್ನು ಪ್ರಶ್ನಿಸುವವರಿಗೆ ಉತ್ತರಿಸುವ ಪರಿ ಎಂದು ಬಹುಭಾಷಾ ನಟ ಪ್ರಕಾಶ್ ರಾಜ್ ಹೇಳಿದ್ದಾರೆ.
ಮಂಗಳವಾರ ನಗರದ ಪುರಭವನ ಸಭಾಂಗಣದಲ್ಲಿ ಗೌರಿ ಸ್ಮಾರಕ ಟ್ರಸ್ಟ್ ಆಯೋಜಿಸಿದ್ದ, ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರ 6ನೇ ಹುತಾತ್ಮ ದಿನದ ಅಂಗವಾಗಿ "ಸರ್ವಾಧಿಕಾರದ ಕಾಲದಲ್ಲಿ ಭಾರತದ ಮರು ಕಲ್ಪನೆ" ಕುರಿತ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಾನು ಇಲ್ಲಿಗೆ ಬರುವುದಕ್ಕೂ ಮುನ್ನ ಒಂದು ಮಾಧ್ಯಮದಲ್ಲಿ ಆದಾಲತ್ ಮಾದರಿಯ ಸಂದರ್ಶನಕ್ಕೆ ಹೋಗಿದ್ದೇ. ಅಲ್ಲಿ 30 ಮಂದಿ ಕಾವಿ ಬಟ್ಟೆ ಧರಿಸಿ ಬಂದಿದ್ದರು.ಅದರಲ್ಲಿ ಓರ್ವ ‘ಸನಾತನಿ ಸಂಸತ್’ ಎಂದು ನೀವು ಸಾಮಾಜಿಕ ಜಾಲತಾಣಗಳಲ್ಲಿ ಹೇಳಿದ್ದೀರಿ ನೀವು ಸನಾತನ ಧರ್ಮದವರು ಅಲ್ಲವೇ ಎಂದು ಪ್ರಶ್ನಿಸಿದ. ಆಗ ನಾನು ಸನಾತನ ಧರ್ಮಕ್ಕೆ ಹುಟ್ಟಿಲ್ಲ. ನಾನು ನಮ್ಮ ಅಮ್ಮ, ಅಪ್ಪನಿಗೆ ಹುಟ್ಟಿದ್ದೇನೆ ಎಂದೇ ಉತ್ತರಿಸಿದೆ ಎಂದು ಉಲ್ಲೇಖಿಸಿದರು.
"ನಾವು ಗೌರಿಯನ್ನ ಹೂಳಲಿಲ್ಲ. ಬಿತ್ತಿದ್ದೇವೆ. ಒಂದು ಧ್ವನಿಯನ್ನು ಅಡಗಿಸಿದ್ದಕ್ಕೆ, ನೂರಾರು ಗೌರಿಯರು ಹುಟ್ಟಿದ್ದೇವೆ. ದೇಶಕ್ಕೆ ಗಾಯವಾದಾಗ ನಾವು ಮೌನವಾಗಿದ್ದರೆ ಅದು ಇಡೀ ದೇಶವನ್ನೇ ಸುಡುತ್ತದೆ. ನಾನು ಧ್ವನಿ ಎತ್ತಬೇಕು. ಪ್ರಶ್ನೆ ಮಾಡಬೇಕು ಎಂದ ಅವರು, ಪ್ರಶ್ನಿಸಿದರೆ ಕೈಯಲ್ಲಿ ಆಯುಧ ಹಿಡಿದು ಬರುತ್ತಾರೆ. ಆದರೆ, ಆಯುಧ ಹಿಡಿದು ಬರುವವರು ಧೀರರಲ್ಲ, ಹೇಡಿಗಳು ಎಂದು ಅವರು ನುಡಿದರು.