ನಾನು ಶೀಘ್ರದಲ್ಲೇ ಆರೋಪ ಮುಕ್ತನಾಗುವೆ: ಮಾಜಿ ಸಚಿವ ಬಿ. ನಾಗೇಂದ್ರ
ಬಳ್ಳಾರಿ: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮ ಆರೋಪದ ಹಿನ್ನೆಲೆಯಲ್ಲಿ ಕಾರಾಗೃಹದಲ್ಲಿದ್ದು ನಿನ್ನೆಯಷ್ಟೇ ಬಿಡುಗಡೆಯಾದ ಮಾಜಿ ಸಚಿವ ಬಿ.ನಾಗೇಂದ್ರ ಅವರನ್ನು ಬಳ್ಳಾರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಅದ್ದೂರಿ ಸ್ವಾಗತಕೋರಿದರು.
ಗುರುವಾರ ನಗರದ ಎಸ್‍ಪಿ ಸರ್ಕಲ್ ಬಳಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಬಳಿಕ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು, ಶಾಸಕ ನರಾ ಭರತ್‍ರೆಡ್ಡಿ ಅವರೊಂದಿಗೆ ವಾಲ್ಮೀಕಿ ಮೂರ್ತಿಗೆ ಮಾಲಾರ್ಪಣೆ ಮಾಡಿದರು. ಆ ಬಳಿಕ ಪಕ್ಷದ ಕಾರ್ಯಕರ್ತರೊಂದಿಗೆ ಸೇರಿ ಹಾಡಿಗೆ ಸ್ಟೇಪ್ ಹಾಕಿ ಸಂಭ್ರಮಪಟ್ಟರು.
ಈ ವೇಳೆ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಬಿ.ನಾಗೇಂದ್ರ, ‘ವಾಲ್ಮೀಕಿ ಸಮುದಾಯದ ಮಗನಾಗಿ ವಾಲ್ಮೀಕಿ ಜಯಂತಿಯಂದು ನನಗೆ ಮಾತನಾಡಲಿಕ್ಕೆ ಬೇಸರವಾಗುತ್ತಿದೆ. ನಾವು ಯಾವುದೇ ಹಗರಣ ಮಾಡಿಲ್ಲ. ಇದೆಲ್ಲವೂ ಬಿಜೆಪಿಯವರ ಕುತಂತ್ರ. ಸಿಬಿಐ, ಈಡಿ ಬಳಸಿ ಕಾಂಗ್ರೆಸ್ ಸರಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನದಿಂದ ನನ್ನನ್ನು ಟಾರ್ಗೆಟ್ ಮಾಡಿದ್ದಾರೆ. ಈ ಪ್ರಕರಣದಿಂದ ಶೀಘ್ರದಲ್ಲೇ ಆರೋಪ ಮುಕ್ತನಾಗುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಗಂಗಾವತಿ ಕ್ಷೇತ್ರದ ಶಾಸಕ ಗಾಲಿ ಜನಾರ್ದನ ರೆಡ್ಡಿ ಜಾರಿ ನಿರ್ದೇಶನಾಲಯ (ಈಡಿ), ಸಿಬಿಐ ಭಯದಿಂದ ಬಿಜೆಪಿ ಸೇರಿದ್ದು, ಅವರು ಕೆಆರ್‍ಪಿಪಿ ಪಕ್ಷ ಕಟ್ಟಿದಾಗ ಬಿಜೆಪಿ ವಿರುದ್ದ ಸಾಕಷ್ಟು ಆರೋಪಗಳನ್ನು ಮಾಡಿದ್ದರು. ಇದೀಗ ಉಪಚುನಾವಣೆಯಲ್ಲಿ ರೆಡ್ಡಿ, ಸಂಡೂರಿನಲ್ಲಿ ಮನೆಯಲ್ಲ, ಅರಮನೆ ಮಾಡಿದ್ರೂ ಕಾಂಗ್ರೆಸ್ ಗೆಲುವು ನಿಶ್ಚಿತ. ಅವರು ಬಳ್ಳಾರಿಗೆ ಬಂದಿರುವುದು ನಮ್ಮ ಪಕ್ಷದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ತಿಳಿಸಿದರು.