ʼಬೆಳಗಾವಿ ಸದನಕ್ಕೆ ಹೋಗುತ್ತೇನೆʼ ಸಿಎಂ ಭೇಟಿ ಬಳಿಕ ಪ್ರತಿಕ್ರಿಯಿಸಿದ ಬಿಆರ್ ಪಾಟೀಲ್
ಬೆಂಗಳೂರು:ನನ್ನ ಮೇಲಿನ ಆರೋಪ ಸಾಬೀತಾದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದ ಆಳಂದ ಶಾಸಕ ಬಿಆರ್ ಪಾಟೀಲ್ ಇಂದು ಸಿಎಂ ಭೇಟಿಯಾಗಿ ಈ ಸಂಬಂಧ ಮಾತುಕತೆ ನಡೆಸಿದ್ದಾರೆ.
ಸಿಎಂ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಬಿ ಆರ್ ಪಾಟೀಲ್, ʼಸಿಎಂ ನನಗೆ ದೂರವಾಣಿ ಕರೆಮಾಡಿ ಬರಲು ಸೂಚಿಸಿದ್ದರು. ನನ್ನ ಜತೆ ಚರ್ಚಿಸಿ ಸಿಎಂ ಸಮಸ್ಯೆ ಬಗೆಹರಿಸಿದ್ದಾರೆ. ಕೃಷ್ಣಭೈರೇಗೌಡ ನನಗೆ ಒಬ್ಬರಿಗೇ ಅಲ್ಲ, ಎಲ್ಲರಿಗೂ ಸವಾಲು ಹಾಕಿದ್ದಾರೆ. ಬೆಳಗಾವಿ ಅಧಿವೇಶನದಲ್ಲಿ ಭಾಗವಹಿಸುವಂತೆ ಮುಖ್ಯಮಂತ್ರಿಗಳು ಆದೇಶಿಸಿದ್ದಾರೆ. ಹಾಗಾಗಿ ಅಧಿವೇಶನದಲ್ಲಿ ಭಾಗಿಯಾಗುತ್ತೇನೆ ʼಎಂದು ಪ್ರತಿಕ್ರಿಯಿಸಿದರು.
ಸಿಎಂ ಜೊತೆಗಿನ ಸಭೆ ನನಗೆ ಸಮಾಧಾನ ತಂದಿದೆ. ಪಂಚ ರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷ ಮುಜುಗರಕ್ಕೀಡಾಗಬಾರದು ಎಂದು ಸುಮ್ಮನಿದ್ದೆ. ಪ್ರಿಯಾಂಕ್ ಖರ್ಗೆ ಹಾಗೂ ಕೃಷ್ಣ ಬೈರೇಗೌಡ ಜೊತೆಗೂ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಸ್ಪಷ್ಟಪಡಿಸಿದರು.
ಪಾಟೀಲ್ ಏನಿದು ಪತ್ರ: ‘ನಾನು ಈ ಹಿಂದೆ 2013ರಲ್ಲಿ ಶಾಸಕನಾಗಿದ್ದಾಗ ಕ್ಷೇತ್ರದಲ್ಲಿ ಕೆಲ ಕಾಮಗಾರಿಗಳನ್ನು ಕೆಆರ್ ಕೆಆರ್ ಐಡಿಎಲ್ ನೀಡಿದ್ದೆ. ಆದರೆ, ಕಾರಣಾಂತರಗಳಿಂದ 2013ರಲ್ಲಿ ನೀಡಿದ್ದ ಕಾಮಗಾರಿಗಳು ಪೂರ್ಣವಾಗಿಲ್ಲ. ಈ ಬಗ್ಗೆ ನಾನು ಕಳೆದ ಅಧಿವೇಶನದಲ್ಲಿ ಪ್ರಸ್ತಾಪ ಮಾಡಿದಾಗ ನನ್ನನ್ನೆ ಅನುಮಾನದಿಂದ ನೋಡಲಾಯಿತು.
ಅಂದಿನ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆ ಅನುಪಸ್ಥಿತಿಯಲ್ಲಿ ಸಚಿವ ಕೃಷ್ಣ ಭೈರೇಗೌಡ ನನ್ನ ಮೇಲೆ ಅನುಮಾನ ಬರುವಂತೆ ಸದನದಲ್ಲಿ ಮಾತನಾಡಿದರು. ಕೆಆರ್ ಐಡಿಎಲ್ ಕಡೆಯಿಂದ ನಾನು ಹಣ ಪಡೆದು ಭೂಸೇನೆಗೆ ಕಾಮಗಾರಿ ವಹಿಸಿದ್ದೇನೆಂದು ಸಂಶಯ ಮೂಡುವಂತೆ ಮಾತನಾಡಿದ್ದರು. ಆ ಬಳಿಕ ಪ್ರಿಯಾಂಕ ಖರ್ಗೆ ಕಾಮಗಾರಿಗಳ ಕುರಿತು ಸಭೆ ನಡೆಸಲಿಲ್ಲ.
ನಾನು ಇದೀಗ ಇಂತಹ ಆರೋಪಗಳನ್ನು ಹೊತ್ತುಕೊಂಡು ಬೆಳಗಾವಿ ಅಧಿವೇಶನಕ್ಕೆ ಹಾಜರಾಗುವುದು ಸರಿಯಲ್ಲ. ಆರೋಪಗಳನ್ನು ಹೊತ್ತು ಸದನಕ್ಕೆ ಬಂದರೆ ನಾನು ಆರೋಪ ಒಪ್ಪಿಕೊಂಡಂತಾಗುತ್ತದೆ. ಹೀಗಾಗಿ ನನ್ನ ಮೇಲೆ ಬಂದ ಆರೋಪಗಳ ಕುರಿತು ತನಿಖೆ ನಡೆಸಿ. ಸತ್ಯಾಸತ್ಯತೆ ಹೊರ ಬರಲು ತನಿಖೆಗೆ ಆದೇಶ ನೀಡಿ, ನನ್ನನ್ನು ಆರೋಪ ಮುಕ್ತ ನನ್ನಾಗಿ ಮಾಡಬೇಕು.
ಒಂದು ವೇಳೆ ನನ್ನ ಮೇಲಿನ ಆರೋಪ ಸಾಬೀತಾದರೆ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ದನಿದ್ದೇನೆ. ಪಂಚ ರಾಜ್ಯ ಚುನಾವಣೆ ಇರುವುದರಿಂದ ಪಕ್ಷದ ಮೇಲೆ ಪ್ರತಿಕೂಲ ಪರಿಣಾಮ ಬೀರಬಾರದೆಂದು ಈಗ ಪತ್ರ ಬರೆಯುತ್ತಿದ್ದೇನೆ. ಕೂಡಲೇ ತನಿಖಾ ಆಯೋಗ ರಚನೆ ಮಾಡಬೇಕು’ ಎಂದು ಶಾಸಕ ಬಿ.ಆರ್.ಪಾಟೀಲ್, ಸಿಎಂಗೆ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.