ಹೈಕಮಾಂಡ್ ಭೇಟಿ ಬಳಿಕ ನನ್ನ ಮುಂದಿನ ನಿರ್ಧಾರ ತಿಳಿಸುತ್ತೇನೆ: ಮಾಜಿ ಸಚಿವ ವಿ.ಸೋಮಣ್ಣ
ಮೈಸೂರು: ಸದ್ಯದಲ್ಲಿಯೇ ನಾನು ದೆಹಲಿಗೆ ತೆರಳುತ್ತಿದ್ದು ಹೈಕಮಾಂಡ್ ಭೇಟಿ ಬಳಿಕ ನನ್ನ ಮುಂದಿನ ನಿರ್ಧಾರ ತಿಳಿಸುತ್ತೇನೆ ಎಂದು ಮಾಜಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.
ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾರ್ತಿಕ ಮಾಸ ಮುಗಿದು ಇದೀಗ ಧನುರ್‍ಮಾಸ ಆರಂಭವಾಗುತ್ತಿದೆ ಎಂದು ಮಾರ್ಮಿಕವಾಗಿ ನುಡಿದರು.
ಸದ್ಯದಲ್ಲೇ ಮೂರ್ನಾಲ್ಕು ಮಂದಿ ದೆಹಲಿಗೆ ತೆರಳಿ ಹೈಕಮಾಂಡ್ ಭೇಟಿ ಮಾಡಿ ಮಾತುಕತೆ ನಡೆಸುತ್ತೇವೆ. ಹೈಕಮಾಂಡ್ ಭೇಟಿ ಬಳಿಕ ನನ್ನ ಮುಂದಿನ ನಿರ್ಧಾರ ತಿಳಿಸುತ್ತೇನೆ. ಹೈಕಮಾಂಡ್ ಭೇಟಿ ವೇಳೆ ವಿಧಾನಸಭೆ ಚುನಾವಣೆಯಲ್ಲಿ ಏನೆಲ್ಲಾ ಬೆಳವಣಿಗೆ ಆಯಿತು ಎಂಬುದನ್ನು ಮನವರಿಕೆ ಮಾಡಿಕೊಡುತ್ತೇವೆ ಎಂದರು.
ಕೆಲ ಬಿಜೆಪಿ ನಾಯಕರ ಸೋಲಿಗೆ ಯಡಿಯೂರಪ್ಪ, ವಿಜಯೇಂದ್ರ ಕಾರಣ ಎಂಬ ವಿಚಾರ ಕುರಿತು ಪ್ರತಿಕ್ರಿಯಿಸಿದ ವಿ.ಸೋಮಣ್ಣ, ವಿಧಾನಸಭೆ ಚುನಾವಣೆಯಲ್ಲಿ ನನ್ನ ಸೋಲಿಗೆ ಏನು ಕಾರಣ ಎಂದು ಎಲ್ಲರಿಗೂ ಗೊತ್ತಿದೆ. ಪದೇ ಪದೇ ಅದೇ ವಿಚಾರ ಮಾತನಾಡುವುದು ಬೇಡ. ನಾನು ಲೋಕಸಭಾ ಚುನಾವಣೆ ಟಿಕೆಟ್ ಆಕಾಂಕ್ಷಿಯಲ್ಲ. ಆದರೆ ಪಕ್ಷ ನೀಡುವ ಯಾವುದೇ ಜವಾಬ್ದಾರಿಯನ್ನು ನಿಭಾಯಿಸುತ್ತೇನೆ ಎಂದರು.
ಕಾಂಗ್ರೆಸ್ ಶಾಸಕರ ಔತಣಕೂಟದಲ್ಲಿ ಬಿಜೆಪಿ ಶಾಸಕರು ಭಾಗಿ ವಿಚಾರ ಕುರಿತು ಪ್ರತಿಕ್ರಿಯಿಸಿದ ವಿ.ಸೋಮಣ್ಣ, ಎಸ್ ಟಿ ಸೋಮಶೇಖರ್, ಶಿವರಾಮ್ ಹೆಬ್ಬಾರ್ ಅವರಿಗೆ ಔತಣಕೂಟಕ್ಕೆ ಆಹ್ವಾನ ನೀಡಿದ್ದರು. ಹಾಗಾಗಿ ಅವರು ಹೋಗಿದ್ದಾರೆ. ಇಬ್ಬರೂ ಕೂಡ ಈ ಮೊದಲು ಕಾಂಗ್ರೆಸ್ ನಲ್ಲಿದ್ದವರು. ಊಟಕ್ಕೆ ಹೋದಾಕ್ಷಣ ಅವರು ಕಾಂಗ್ರೆಸ್ ಗೆ ಹೋಗುತ್ತಾರೆಂದು ಅರ್ಥವಲ್ಲ. ನೀವು ಬಿಜೆಪಿ ತೊರೆಯುತ್ತೀರಾ? ಎಂಬ ಪ್ರಶ್ನೆಗೆ ಎಲ್ಲದಕ್ಕೂ ಕಾಲ ಕೂಡಿ ಬರಬೇಕು. ಸೂಕ್ತ ಕಾಲದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುತ್ತೇನೆಂದು ಹೇಳಿದರು.