ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರಿಡಲು ನಾನು ಬಿಡುವುದಿಲ್ಲ: ಸಂಸದ ಪ್ರತಾಪ್ ಸಿಂಹ
ಮೈಸೂರು: ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರು ಇಡುವ ಬಗ್ಗೆ ಕಾಂಗ್ರೆಸ್ ಸರಕಾರ ಚರ್ಚೆ ಶುರು ಮಾಡಿದೆ. ಆದರೆ ಇಂಥದೊಂದು ಚರ್ಚೆ ಮತ್ತು ಪ್ರಸ್ತಾವನೆ ಅಸಂಬದ್ಧ. ಯಾವುದೇ ಕಾರಣಕ್ಕೂ ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರಿಡಲು ನಾನು ಬಿಡುವುದಿಲ್ಲ ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.
ಈ ಸಂಬಂಧ ಶನಿವಾರ ಮಾಧ್ಯಮ ಹೇಳಿಕೆ ಹೊರಡಿಸಿರುವ ಅವರು, ಕಾನೂನಾತ್ಮಕವಾಗಿ ಮೈಸೂರು ವಿಮಾನ ನಿಲ್ದಾಣಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹೆಸರು ಇಡುವ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಕಳೆದ ಬಿಜೆಪಿ ಸರಕಾರದ ಅವಧಿಯಲ್ಲಿ ಅಂದಿನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ನಾನು 27-05-2022 ರಂದು ಖುದ್ದಾಗಿ ಪತ್ರ ಬರೆದು, ವೈಯಕ್ತಿಕವಾಗಿ ಬೇಟಿಯಾಗಿ "ಮೈಸೂರು ವಿಮಾನ ನಿಲ್ದಾಣ ಎಂದು ಪ್ರಸ್ತುತ ಇರುವ ಹೆಸರನ್ನು ನಾಲ್ವಡಿ ಕೃಷ್ಣರಾಜ ಒಡೆಯರ್ ವಿಮಾನ ನಿಲ್ದಾಣ" ಎಂದು ಮರು ನಾಮಕರಣ ಮಾಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವಂತೆ ವಿನಂತಿಸಿಕೊಂಡಿದ್ದೆ. ಜತೆಗೆ ವಿಮಾನ ನಿಲ್ದಾಣ ರನ್ ವೇ ವಿಸ್ತರಣೆಗೂ ಹಣ ಬಿಡುಗಡೆ ಮಾಡುವಂತೆ ಕೋರಿದ್ದೆ. ನನ್ನ ಮನವಿಗೆ ಸ್ಪಂದಿಸಿದ ಬಸವರಾಜು ಬೊಮ್ಮಾಯಿ ಅವರು ರನ್ ವೇ ವಿಸ್ತರಣೆಗೆ 319 ಕೋಟಿ ರೂ. ಬಿಡುಗಡೆ ಮಾಡಿದ್ದರು. ಜತೆಗೆ ಮೈಸೂರು ವಿಮಾನ ನಿಲ್ದಾಣಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹೆಸರು ಮರು ನಾಮಕರಣಕ್ಕೆ ಕ್ಯಾಬಿನೆಟ್ ಒಪ್ಪಿಗೆಯನ್ನೂ ಕೊಟ್ಟರು. ಇದಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಅವರು 18-08-2022 ರಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರದು ಶಿಫಾರಸ್ಸನ್ನೂ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಇಂತಹ ಸಂದರ್ಭದಲ್ಲಿ ಮತ್ತೆ ರಾಜ್ಯ ಕಾಂಗ್ರೆಸ್ ಸರಕಾರ ಟಿಪ್ಪು ಹೆಸರು ಪ್ರಸ್ತಾಪ ಮಾಡುತ್ತಿರುವುದು ಸರಿಯಲ್ಲ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನಸ್ಥಿತಿ ಏನು ಎಂಬುದು ಚೆನ್ನಾಗಿ ಗೊತ್ತಿದೆ. ಸಿದ್ದರಾಮಯ್ಯನವರಿಗೆ ಮೈಸೂರಿನ ಯದುವಂಶದ ಬಗ್ಗೆ ಎಳ್ಳಷ್ಟೂ ಗೌರವ, ಪ್ರೀತಿ ಇಲ್ಲ. ಸಿದ್ದರಾಮಯ್ಯ ಅವರು ಈ ಮೊದಲು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಟಿಪ್ಪು ಜಯಂತಿ ಮಾಡಿ ಮೈಸೂರಿಗರಿಗೆ, ಕೂಡವರಿಗೆ ಹಾಗೂ ಹಿಂದೂಗಳಿಗೆ ನೋವುಂಟು ಮಾಡುವ ಕೆಲಸ ಮಾಡಿದ್ದರು. ಯುಪಿಎ ಸರಕಾರವಿದ್ದಾಗ ಶ್ರೀರಂಗಪಟ್ಟಣದಲ್ಲಿ ಟಿಪ್ಪು ವಿಶ್ವವಿದ್ಯಾನಿಲಯ ತೆರೆಯುವ ಪ್ರಯತ್ನ ಮಾಡಿದ್ದರು. ಈ ಕಾರಣಕ್ಕಾಗಿಯೇ ನಾನು ನಮ್ಮ ಬಿಜೆಪಿ ಸರಕಾರದ ಅವಧಿಯಲ್ಲಿ ಮೈಸೂರು ಭಾಗದ ಜನರ ಭಾವನೆಗಳಂತಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹೆಸರನ್ನು ವಿಮಾನ ನಿಲ್ದಾಣಕ್ಕೆ ಮರು ನಾಮಕರಣ ಮಾಡಲು ಶತ ಪ್ರಯತ್ನ ಮಾಡಿದ್ದು ಎಂದು ಹೇಳಿದ್ದಾರೆ.
ನಾನು ಯಾವುದೇ ಕಾರಣಕ್ಕೂ ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರು ನಾಮಕರಣ ಮಾಡಲು ಬಿಡುವುದಿಲ್ಲ. ಈ ವಿಚಾರದಲ್ಲಿನ ನನ್ನ ನಿಲುವಿಗೆ ಸದಾ ಬದ್ಧನಾಗಿರುತ್ತೇನೆ. ಯಾರೇ ಅಡ್ಡಬಂದರೂ ಸುಮ್ಮನೆ ಇರುವುದಿಲ್ಲ ಎಂಬ ಹೇಳಿಕೆ ನೀಡಿದ್ದಾರೆ.