ಸಿ.ಟಿ.ರವಿ ಕ್ಷಮೆಯಾಚಿಸಿದ್ದರೆ ಎಲ್ಲವೂ ಮುಗಿದುಹೋಗುತ್ತಿತ್ತು : ಸಚಿವ ಎಂ.ಬಿ.ಪಾಟೀಲ್
ಸಿ.ಟಿ.ರವಿ/ಎಂ.ಬಿ.ಪಾಟೀಲ್
ಬೆಂಗಳೂರು : ‘ಮಹಿಳೆಯೊಬ್ಬರು ಕಲ್ಪನೆಯಿಂದ ತನ್ನ ವಿರುದ್ದ ಅವಹೇಳಕಾರಿ ಪದ ಬಳಕೆ ಮಾಡಿದ್ದಾರೆಂದು ಆರೋಪ ಮಾಡಲು ಸಾಧ್ಯವೇ?. ಪರಿಷತ್ ಸದಸ್ಯ ಸಿ.ಟಿ.ರವಿ ಬಹಿರಂಗವಾಗಿ ಕ್ಷಮೆಯಾಚಿಸಿದರೆ ಸಮಸ್ಯೆ ಬಗೆಹರಿಯಲಿದೆ’ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಇಂದಿಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಸೋಮವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ಯಾವುದೇ ಮಹಿಳೆ ಕೇವಲ ಕಲ್ಪನೆಯ ಆಧಾರದ ಮೇಲೆ ಇಂತಹ ಆರೋಪಗಳನ್ನು ಮಾಡಲು ಸಾಧ್ಯವಿಲ್ಲ. ಅವರು (ಬಿಜೆಪಿ) ಈ ದೇಶದ ಸಂಸ್ಕೃತಿಯ ಬಗ್ಗೆ ಆಗಾಗ್ಗೆ ಉಪನ್ಯಾಸ ನೀಡುತ್ತಾರೆ. ಆದರೆ, ಇದು ಅವರ ಸಂಸ್ಕೃತಿಯೇ? ಈ ರೀತಿಯ ಅವಹೇಳನಕಾರಿ ಭಾಷೆಯನ್ನು ಬಳಸುವುದು ಸ್ವೀಕಾರಾರ್ಹವಲ್ಲ' ಎಂದು ಹೇಳಿದರು.
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾಡುತ್ತಿರುವ ಆರೋಪಗಳು ಪಿತೂರಿಯ ಭಾಗ ಎಂಬ ಬಿಜೆಪಿ ನಾಯಕರ ಹೇಳಿಕೆಗಳನ್ನು ಸರಿಯಲ್ಲ. ಸಮಸ್ಯೆಯನ್ನು ಹತ್ತಿಕ್ಕಲು ಪೊಲೀಸರು ಸಿ.ಟಿ.ರವಿಗೆ ನಕಲಿ ಎನ್ಕೌಂಟರ್ ಮಾಡುವ ಬೆದರಿಕೆ ಹಾಕಿದ್ದಾರೆಂಬ ಆರೋಪದಲ್ಲಿ ಹುರುಳಿಲ್ಲ. ರವಿ ಬಹಿರಂಗ ಕ್ಷಮೆ ಕೇಳಿದ್ದರೆ ಎಲ್ಲವೂ ಮುಗಿದುಹೋಗುತ್ತಿತ್ತು ಎಂದು ಅವರು ತಿಳಿಸಿದರು.