ದ್ವೇಷವನ್ನು ಬಿತ್ತಿದರೆ ಮಕ್ಕಳು, ಮಹಿಳೆಯರು ಬಲಿಯಾಗುತ್ತಾರೆ: ಪ್ರೊ.ಎಸ್.ಜಿ.ಸಿದ್ದರಾಮಯ್ಯ

ಬೆಂಗಳೂರು, ಡಿ.11: ದ್ವೇಷದ ರಾಜಕಾರಣ ಮತ್ತು ತಮ್ಮದೇ ಅಜೆಂಡಾಗಳ ಮೂಲಕ ದೇಶವನ್ನು ಆಳಲಾಗುತ್ತಿದೆ. ಈ ರೀತಿ ರಾಜ್ಯ ರಾಜ್ಯಗಳ ನಡುವೆ ದ್ವೇಷವನ್ನು ಬಿತ್ತಿದರೆ ಮಕ್ಕಳು ಮತ್ತು ಮಹಿಳೆಯರು ಬಲಿಯಾಗುತ್ತಾರೆ ಎಂದು ಸಾಹಿತಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಆತಂಕ ವ್ಯಕ್ತಪಡಿಸಿದ್ದಾರೆ.
ಸೋಮವಾರ ನಗರದ ಪುರಭವನದಲ್ಲಿ ಐಸಿಡಿಎಸ್, ಎಂಡಿಎಂ, ಎನ್‍ಎಂಎಂ, ಐಸಿಪಿಎಸ್, ಎನ್‍ಆರ್ ಎಲ್‍ಎಂ, ಪೋಷಣ್ ಅಭಿಯಾನ ನರೇಗಾ ಯೋಜನೆಗಳಲ್ಲಿರುವ ನೌಕರರ ಸಂಘಟನೆಗಳು ಆಯೋಜಿಸಿದ್ದ ‘ಆಹಾರ, ಆರೋಗ್ಯ, ಶಿಕ್ಷಣಕ್ಕಾಗಿ ಇರುವ ಕೇಂದ್ರ ಪುರಸ್ಕೃತ ಯೋಜನೆಗಳು-ನೌಕರರ ಸ್ಥಿತಿಗತಿಗಳು’ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ಪ್ರಜಾಪ್ರಭುತ್ವ ಅವನತಿ ಕಡೆಗೆ ಹೆಜ್ಜೆ ಇಡುತ್ತಿರುವುದನ್ನು ನೋಡುತ್ತಿದ್ದೇವೆ. ದೇಶ ಮತ್ತು ಜನ ದೊಡ್ಡವರು ಎಂಬ ಅರಿವು ಆಳುವ ಪಕ್ಷ ಮತ್ತು ವಿರೋಧ ಪಕ್ಷಗಳಲ್ಲಿ ಇರಬೇಕು. ದುರಾದೃಷ್ಟವಶಾತ್ ಕೇಂದ್ರ ಸರಕಾರ ತಾರತಮ್ಯ ನೀತಿಯನ್ನು ಅನುಸರಿಸುತ್ತಿದ್ದು, ಈ ದ್ವೇಷ ರಾಜಕಾರಣಕ್ಕೆ ಮಕ್ಕಳು ಮತ್ತು ಮಹಿಳೆಯರು ಬಲಿಯಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ನಮ್ಮ ದೇಶ ಅಸಮಾನತೆಯ ಆಗರದಿಂದ ಕೂಡಿದೆ. ಹೀಗಾಗಿ ಪಂಚವಾರ್ಷಿಕ ಯೋಜನೆಗಳನ್ನು ಅನುಷ್ಠಾನಕ್ಕೆ ತರುವ ಕೆಲಸಗಳಾದವು. ವಿರೋಧ ಪಕ್ಷಗಳು ಇದಕ್ಕೆ ಪೂರಕವಾಗಿದ್ದವು. ಆಳುವ ಪಕ್ಷಗಳ ತಪ್ಪು ಹೆಜ್ಜೆಗಳನ್ನು ಖಂಡಿಸುತ್ತಲೇ, ತಿದ್ದುವ ಕೆಲಸವನ್ನು ಮಾಡುತ್ತಿದ್ದರು. ಲೋಹಿಯಾ ಅಂಥವರು ಆರೋಗ್ಯಕರವಾಗಿ ಚರ್ಚೆಗಳನ್ನು ನಡೆಸುತ್ತಿದ್ದರು. ಒಳ್ಳೆಯ ಸಂಗತಿಗಳ ಬೆಳವಣಿಗೆಗೆ ಸಹಕರಿಸುತ್ತಿದ್ದರು. ಉಚಿತ ಶಿಕ್ಷಣ, ಕಡ್ಡಾಯ ಶಿಕ್ಷಣ ನೀಡಲಾಯಿತು. ಇಂದು ನಮ್ಮ ಶಿಕ್ಷಣ, ಆರೋಗ್ಯ ಕ್ಷೇತ್ರಗಳು ದ್ವೇಷ ರಾಜಕಾರಣಕ್ಕೆ ಬಲಿಯಾಗಿವೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ವಿಚಾರ ಸಂಕಿರಣದಲ್ಲಿ ಸಿಐಟಿಯು ರಾಜ್ಯಾಧ್ಯಕ್ಷೆ ಎಸ್. ವರಲಕ್ಷ್ಮೀ, ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಎಸ್. ಸುನಂದ, ಸೇರಿದಂತೆ ಸಾವಿರಾರು ಪ್ರತಿನಿಧಿಗಳು ಹಾಜರಿದ್ದರು.