ಕನ್ನಡಿಗರಿಗೆ ಪಾಲು ಕೊಡಿ ಎಂದು ಕೇಳಿದರೆ ಭದ್ರತೆಗೆ ಬೆದರಿಕೆ ಹೇಗೆ?: ಸಿದ್ದರಾಮಯ್ಯ
ʼನನ್ನತೆರಿಗೆ ನನ್ನಹಕ್ಕುʼ ರಾಜ್ಯ ಸರಕಾರದ ಪ್ರತಿಭಟನೆ ಟೀಕಿಸಿದ್ದ ಪ್ರಧಾನಿಗೆ ತಿರುಗೇಟು ನೀಡಿದ ಸಿಎಂ
ಬೆಂಗಳೂರು: ‘ಗುಜರಾತ್ ಸಿಎಂ ಆಗಿದ್ದ ಮೋದಿ ಅವರು ಗುಜರಾತ್ ರಾಜ್ಯಕ್ಕೆ ಕೇಂದ್ರದ ತೆರಿಗೆ ಹಂಚಿಕೆಯಲ್ಲಿ ಅನ್ಯಾಯವಾಗುತ್ತಿದೆ ಎಂದು ಧ್ವನಿ ಎತ್ತಿದ್ದಾಗ ದೇಶದ ಏಕತೆ ಮತ್ತು ಭದ್ರತೆಗೆ ಎದುರಾಗದ ಬೆದರಿಕೆ ನಾವು ಕನ್ನಡಿಗರಿಗೆ ನ್ಯಾಯಯುತ ಪಾಲು ಕೊಡಿ ಎಂದು ಕೇಳುವಾಗ ಯಾಕೆ ಎದುರಾಗುತ್ತದೆ?’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಗುರುವಾರ ಈ ಸಂಬಂಧ ಪ್ರಕಟಣೆ ನೀಡಿರುವ ಅವರು, ‘ತೆರಿಗೆ ಹಂಚಿಕೆಯೂ ಸೇರಿದಂತೆ ಕನ್ನಡಿಗರಿಗೆ ಕೇಂದ್ರ ಸರಕಾರದಿಂದ ಆಗುತ್ತಿರುವ ಅನ್ಯಾಯವನ್ನು ಪ್ರತಿಭಟಿಸಿ ನಮ್ಮ ಸರಕಾರ ನಡೆಸಿದ್ದ ‘ದಿಲ್ಲಿ ಚಲೋ’ ಹೋರಾಟ ದೇಶದ ಏಕತೆ ಮತ್ತು ಭದ್ರತೆಗೆ ಬೆದರಿಕೆ ಒಡ್ಡಿದೆ ಎಂಬ ಪ್ರಧಾನಿ ಮೋದಿ ಅವರ ಹೇಳಿಕೆ ಅಚ್ಚರಿ ಉಂಟು ಮಾಡಿದೆ’ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
‘ಇದೇ ಮೋದಿಯವರು ಗುಜರಾತ್ ರಾಜ್ಯದ ಸಿಎಂ ಆಗಿದ್ದಾಗ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಯುಪಿಎ ಸರಕಾರದ ವಿರುದ್ಧ ಪುಂಖಾನುಪುಂಖವಾಗಿ ನೀಡಿರುವ ಹೇಳಿಕೆಗಳನ್ನು ಅವರ ಗಮನಕ್ಕೆ ತರಬಯಸುತ್ತೇನೆ. ಪ್ರಧಾನಿ ಮೋದಿ ಅವರೇ, ನಿಮ್ಮ ಹೇಳಿಕೆಗಳು ದೇಶದ ಏಕತೆ ಮತ್ತು ಭದ್ರತೆಗೆ ಬೆದರಿಕೆ ಒಡ್ಡಿರಲಿಲ್ಲವೇ? ದಯವಿಟ್ಟು ಉತ್ತರ ಕೊಡಿ’ ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
‘ಕೇಂದ್ರ ಹಣಕಾಸು ಆಯೋಗದ ವಿರುದ್ದ ಮೊದಲು ಮಾತನಾಡಿದ್ದೇ ಮೋದಿ ಅವರು. ಮೋದಿಯವರು ಗುಜರಾತ್ ಸಿಎಂ ಆಗಿದ್ದಾಗ 2012ರ ಡಿಸೆಂಬರ್ ಆರರಂದು ಹೇಳಿಕೆಯೊಂದನ್ನು ನೀಡಿ ‘ಗುಜರಾತ್ ರಾಜ್ಯ ಕೇಂದ್ರ ಸರಕಾರಕ್ಕೆ 60,000 ಕೋಟಿ ರೂ.ನೀಡುತ್ತಿದೆ, ಇದರಲ್ಲಿ ನಮಗೆ ವಾಪಸ್ ಬಂದದ್ದು ಎಷ್ಟು? ಗುಜರಾತ್ ಭಿಕ್ಷುಕ ರಾಜ್ಯವೇ? ಎಂದು ಅವರು ಪ್ರಶ್ನಿಸಿದ್ದರು.
2008ರಲ್ಲಿ ವಡೋದರಾದ ಸಮಾರಂಭದಲ್ಲಿ ಮಾತನಾಡುತ್ತಾ ‘ಗುಜರಾತ್ ರಾಜ್ಯ ಪ್ರತಿವರ್ಷ 40,000 ಕೋಟಿ ರೂ.ಗಳನ್ನು ತೆರಿಗೆ ರೂಪದಲ್ಲಿ ಕೇಂದ್ರ ಸರಕಾರಕ್ಕೆ ಪಾವತಿಸುತ್ತಿದೆ. ಅದರಲ್ಲಿ ಕೇವಲ ಶೇ.2.5ರಷ್ಟು ಮಾತ್ರ ರಾಜ್ಯಕ್ಕೆ ವಾಪಸು ನೀಡಲಾಗುತ್ತದೆ. ಇಷ್ಟು ಕಡಿಮೆ ಮೊತ್ತವನ್ನು ವಾಪಸು ನೀಡುವ ಬದಲಿಗೆ ಒಂದು ವರ್ಷದ ಅವಧಿಗೆ ನಮ್ಮ ತೆರಿಗೆಯನ್ನು ನಾವೇ ಬಳಸಿಕೊಳ್ಳಲು ಅವಕಾಶ ನೀಡಬಾರದೇಕೆ? ಎಂದು ಕೇಂದ್ರ ಸರಕಾರದ ಅಸ್ತಿತ್ವನ್ನೇ ಪ್ರಶ್ನಿಸಿದ್ದರು.
ತೆರಿಗೆ ಹಂಚಿಕೆಗೆ ಅನುಸರಿಸಲಾಗುತ್ತಿರುವ ಮಾನದಂಡವನ್ನು ಹಣಕಾಸು ಆಯೋಗ ಬದಲಾವಣೆ ಮಾಡಬೇಕು, ಉತ್ತಮ ರೀತಿಯಲ್ಲಿ ಹಣಕಾಸು ನಿರ್ವಹಣೆ ಮತ್ತು ಅಭಿವೃದ್ದಿ ಕಾರ್ಯಗಳನ್ನು ನಡೆಸುವ ರಾಜ್ಯಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಹಣಕಾಸು ನಿರ್ವಹಣೆಯಲ್ಲಿ ಸೋತಿರುವ ರಾಜ್ಯಗಳಿಗೆ ಹೆಚ್ಚಿನ ಉತ್ತೇಜನ ನೀಡಿ ಉತ್ತಮ ರೀತಿಯಲ್ಲಿ ಹಣಕಾಸು ನಿರ್ವಹಣೆ ಮಾಡುತ್ತಿರುವ ರಾಜ್ಯಗಳನ್ನು ನಿರ್ಲಕ್ಷಿಸುವ ಈಗಿನ ತೆರಿಗೆ ಹಂಚಿಕೆ ವಿಧಾನ ಬದಲಿಸಬೇಕಾಗಿದೆ. ಮೂಲಸೌಕರ್ಯಗಳ ಸುಧಾರಣೆ ಮತ್ತು ದೇಶದ ಅಭಿವೃದ್ದಿಗೆ ಗಣನೀಯ ಕೊಡುಗೆಗಳನ್ನು ನೀಡುವ ರಾಜ್ಯಗಳಿಗೆ ಹೆಚ್ಚಿನ ಉತ್ತೇಜನ ನೀಡಬೇಕು’ ಎಂದು ಹಣಕಾಸು ಆಯೋಗದ ಮುಂದೆ ವಾದ ಮಾಡಿದ್ದರು. ಇದು ಕೇಂದ್ರದ ವಿರುದ್ಧದ ನಿಲುವಲ್ಲವೇ?’ ಎಂದು ಅವರು ಕೇಳಿದ್ದಾರೆ.
‘ಇದೇ ರೀತಿ ಕೇಂದ್ರ ಸರಕಾರ ತನ್ನನ್ನು ರಕ್ಷಿಸಿಕೊಳ್ಳಲು ಮತ್ತು ವಿರೋಧಿಗಳನ್ನು ಹಣಿಯಲು ಸಿಬಿಐ ಸಂಸ್ಥೆಯನ್ನು ದುರುಪಯೋಗ ಮಾಡುತ್ತಿದೆ ಎಂದು ಗುಜರಾತ್ ಸಿಎಂ ಆಗಿ ಆರೋಪಿಸುತ್ತಿದ್ದ ಮೋದಿಯವರು ಈಗ ಸಿಬಿಐ, ಇಡಿ ಮತ್ತು ಆದಾಯ ತೆರಿಗೆ ಇಲಾಖೆಯ ಪ್ರಾಮಾಣಿಕತೆಯನ್ನು ಪ್ರಶ್ನಿಸಿದವರನ್ನು ದೇಶದ್ರೊಹಿಗಳೆಂದು ದೂರುತ್ತಿದ್ದಾರೆ. ಯುಪಿಎ ಸರಕಾರ ವಿದೇಶಿ ನೇರ ಬಂಡವಾಳ ಹೂಡಿಕೆಯ ಕಾನೂನನ್ನು ಜಾರಿಗೆ ತಂದಾಗ ಅದನ್ನು ವಿರೋಧಿಸಿದ್ದ ಮೋದಿಯವರು ‘ಇನ್ನು ಮುಂದೆ ನಿತ್ಯ ಬಳಕೆಯ ಉಪ್ಪು, ಸಾಂಬಾರ ಪದಾರ್ಥಗಳನ್ನೂ ವಿದೇಶಿಯರೇ ಮಾರುತ್ತಾರೆ' ಎಂದು ವ್ಯಂಗ್ಯವಾಡಿದ್ದರು. ಎಫ್‍ಡಿಐನಿಂದಾಗಿ ದೇಶದ ಸಣ್ಣ ಸಣ್ಣ ಅಂಗಡಿ ಮಾಲೀಕರು ಮತ್ತು ಉತ್ಪಾದನಾ ಕ್ಷೇತ್ರದಲ್ಲಿರುವವರು ನಿರುದ್ಯೋಗಿಗಳಾಗುತ್ತಾರೆ ಎಂದು ಆತಂಕ ವ್ಯಕ್ತಪಡಿಸಿದ್ದರು.
ಆತ್ಮವಂಚನೆಯ ನಡವಳಿಕೆಯನ್ನು ರಾಜ್ಯದ ಮಾಜಿ ಸಿಎಂಗಳಾದ ಬಸವರಾಜ ಬೊಮ್ಮಾಯಿ ಮತ್ತು ಕುಮಾರಸ್ವಾಮಿ ಅವರೂ ಮುಂದುವರಿಸಿದ್ದಾರೆ. 2022ರ ಡಿಸೆಂಬರ್ ತಿಂಗಳಲ್ಲಿ ವಿಧಾನಸಭೆಯಲ್ಲಿಯೇ ನಾನು ಮಾತನಾಡುತ್ತಾ ‘15ನೆ ಹಣಕಾಸು ಆಯೋಗದಿಂದ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿದಾಗ ಆಗ ಸಿಎಂ ಆಗಿದ್ದ ಬೊಮ್ಮಾಯಿಯವರು ಅನ್ಯಾಯವಾಗಿರುವುದು ನಿಜ ಎಂದು ಒಪ್ಪಿಕೊಂಡಿರುವುದು ಸದನದ ದಾಖಲೆಯಲ್ಲಿದೆ, ಪತ್ರಿಕೆಗಳಲ್ಲಿಯೂ ಪ್ರಕಟವಾಗಿದೆ. ಇದೇ ಬೊಮ್ಮಾಯಿಯವರು ಹಣಕಾಸು ಆಯೋಗದಿಂದ ಅನ್ಯಾಯವೇ ಆಗಿಲ್ಲ ಎಂದು ಕೂಗಾಡುತ್ತಿದ್ದಾರೆ.
‘ಕುಮಾರಸ್ವಾಮಿಗೆ ಸತ್ಯ ಮಾತನಾಡಿಯೇ ಗೊತ್ತಿಲ್ಲ. ಕೇಂದ್ರ ಸರಕಾರ ತೆರಿಗೆ ಹಂಚಿಕೆ ಮಾಡುವಾಗ ಗುಜರಾತ್ ರಾಜ್ಯಕ್ಕೆ ಹೆಚ್ಚಿನ ಪಾಲು ನೀಡಿ ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿದ್ದರು. ಈಗ ರಾಜ್ಯಕ್ಕೆ ಅನ್ಯಾಯವಾಗಿಲ್ಲ ಎಂದು ಹೇಳುತ್ತಿರುವ ಕುಮಾರಸ್ವಾಮಿ ಗುಜರಾತ್ ರಾಜ್ಯದ ಹೆಸರೇ ಎತ್ತುತ್ತಿಲ್ಲ. ಸುಳ್ಳಿನಲ್ಲಿ ಇವರು ಮೋದಿಯವರ ಜೊತೆಯಲ್ಲಿ ಪೈಪೋಟಿಗಿಳಿದಂತಿದೆ’
ಸಿದ್ದರಾಮಯ್ಯ ಮುಖ್ಯಮಂತ್ರಿ