ಮೋದಿಯವರಿಗೆ ದಮ್ಮು, ತಾಕತ್ತಿದ್ದರೆ ಭಾರತವನ್ನು ಆಕ್ರಮಿಸಿರುವ ಚೀನಾ ಮೇಲೆ ದಾಳಿ ಮಾಡಲಿ: ಕಾಂಗ್ರೆಸ್
ಬೆಂಗಳೂರು: ಚೀನಿ ಪ್ರಚಾರ ಅಭಿಯಾನ ನಡೆಸುತ್ತಿರುವ ಜಾಲವೊಂದರಿಂದ ನ್ಯೂಸ್ ಕ್ಲಿಕ್ ನೆರವು ಸ್ವೀಕರಿಸಿದೆ ಎಂದು ನ್ಯೂಯಾರ್ಕ್ ಟೈಮ್ಸ್ ಪ್ರಕಟಿಸಿದ ತನಿಖಾ ವರದಿ ಆಧಾರದಲ್ಲಿ ಪತ್ರಕರ್ತ ಹಾಗೂ ನ್ಯೂಸ್ ಕ್ಲಿಕ್ ಸಂಸ್ಥಾಪಕ ಪ್ರಭೀರ್ ಪುರಕಾಯಸ್ಥ ಅವರನ್ನು ಬಂಧಿಸಿರುವ ಬಗ್ಗೆ ಕಾಂಗ್ರೆಸ್ ಪ್ರತಿಕ್ರಿಯಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, ಚೀನಾ ಕಂಪೆನಿಗಳಿಂದ ದೇಣಿಗೆ ಪಡೆಯಲಾಗಿದೆ ಎಂದು ಆರೋಪಿಸಿ ನ್ಯೂಸ್ ಕ್ಲಿಕ್ ಮಾಧ್ಯಮ ಸಂಸ್ಥೆಯ ಮೇಲೆ ದಾಳಿ ಮಾಡಲಾಗಿದೆ. ಚೀನಾ ಕಂಪೆನಿಗಳಿಂದ ದೇಣಿಗೆ ಸ್ವೀಕರಿಸುವುದು ಅಪರಾಧವೆಂದಾದರೆ ಮೊದಲು ಅಪರಾಧಿ ಸ್ಥಾನದಲ್ಲಿ ಮೋದಿಯೇ ನಿಲ್ಲುತ್ತಾರೆ ಎಂದು ಹೇಳಿದೆ.
ಪಿಎಂ ಕೇರ್ಸ್ ಎಂಬ ಗೋಲ್ಮಾಲ್ ನಿಧಿಗೆ ಚೀನಾ ಕಂಪೆನಿಗಳಿಂದ ಕೋಟಿ ಕೋಟಿ ಹಣ ಸಂಗ್ರಹಿಸಲಾಗಿದೆ. ಸರ್ದಾರ್ ಪಟೇಲರ ಪ್ರತಿಮೆ ನಿರ್ಮಾಣದ ಹೊಣೆಯನ್ನು ಚೀನಾ ಕಂಪೆನಿಗೆ ನೀಡಿದ್ದು ಕೂಡ ಕೇಂದ್ರ ಸರ್ಕಾರವೇ. ಮೋದಿಯವರಿಗೆ ದಮ್ಮು ತಾಕತ್ತಿದ್ದರೆ ಭಾರತದ ಮಾಧ್ಯಮ ಸಂಸ್ಥೆಗಳ ಮೇಲೆ ದಾಳಿ ಮಾಡುವ ಬದಲು ಭಾರತವನ್ನು ಆಕ್ರಮಿಸಿರುವ ಚೀನಾ ಮೇಲೆ ದಾಳಿ ಮಾಡಲಿ. ಕನಿಷ್ಠ ಪಕ್ಷ "ಚೀನಾ" ಎಂದು ಹೆಸರು ಹೇಳಿ ವಾಗ್ದಾಳಿಯನ್ನಾದರೂ ಮಾಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದೆ.