ಎಸ್.ಟಿ.ಸೋಮಶೇಖರ್ ಕಾಂಗ್ರೆಸ್‍ನಲ್ಲೇ ಇದ್ದಿದ್ದರೆ ಸಚಿವ ಸ್ಥಾನ ಸಿಗುತ್ತಿತ್ತು..: ಸಚಿವ ಪರಮೇಶ್ವರ್
ಬೆಂಗಳೂರು, ಆ.17: ಶಾಸಕ ಎಸ್.ಟಿ.ಸೋಮಶೇಖರ್ ಕಾಂಗ್ರೆಸ್ ಪಕ್ಷಕ್ಕೆ ವಾಪಸ್ ಬರುತ್ತೇನೆ ಎಂದರೆ ಸ್ವಾಗತಿಸುತ್ತೇವೆ. ಈ ಹಿಂದೆ ಅವರು ಕಾಂಗ್ರೆಸ್ ಪಕ್ಷವನ್ನು ಸಂಘಟಿಸಲು ಶ್ರಮಿಸಿದ್ದಾರೆ. ಆದರೆ, ನಾನು ಅವರನ್ನು ಈ ವಿಚಾರದಲ್ಲಿ ಸಂಪರ್ಕ ಮಾಡಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಕೆಪಿಸಿಸಿ ಅಧ್ಯಕ್ಷನಾಗಿದ್ದಾಗ ಅವರನ್ನು ಬೆಂಗಳೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಮಾಡಿದ್ದೆ. ಕಾಂಗ್ರೆಸ್ ಪಕ್ಷದಿಂದ ಅವರು ಶಾಸಕರಾಗಿದ್ದರು. ಕಾಂಗ್ರೆಸ್‍ನಲ್ಲೆ ಇದ್ದಿದ್ದರೆ ಸಚಿವ ಸ್ಥಾನವು ಸಿಗುತ್ತಿತ್ತು ಎಂದರು.
ಬಿಜೆಪಿಯಲ್ಲಿನ ಬೆಳವಣಿಗೆಗಳು ಬೇಸರ ತರಿಸಿದೆ ಎಂದು ಸೋಮಶೇಖರ್ ಹೇಳಿಕೊಂಡಿದ್ದಾರೆ. ನಮ್ಮ ಪಕ್ಷದ ಸಿದ್ಧಾಂತವನ್ನು ಒಪ್ಪಿ ಬರಬಹುದು. ಅವರ ಸಾಮರ್ಥ್ಯಕ್ಕೆ ತಕ್ಕಂತೆ ಅವಕಾಶಗಳು, ಅಧಿಕಾರವು ಸಿಗುತ್ತದೆ. ರಾಜಕೀಯ ನಿಂತ ನೀರಲ್ಲ, ಇಲ್ಲಿ ಎಲ್ಲವೂ ಸಾಧ್ಯವಿದೆ ಎಂದು ಪರಮೇಶ್ವರ್ ಹೇಳಿದರು.
ನಟ ಉಪೇಂದ್ರ ಹೇಳಿಕೆಯಿಂದ ಉಂಟಾಗಿರುವ ವಿವಾದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಉಪೇಂದ್ರ ತಮ್ಮ ತಪ್ಪನ್ನು ಒಪ್ಪಿಕೊಂಡು, ವಿಷಾದ ವ್ಯಕ್ತಪಡಿಸಿದ್ದಾರೆ. ಕಾನೂನು ಪ್ರಕ್ರಿಯೆ ನಡೆಯುತ್ತಿದೆ. ಈ ಬಗ್ಗೆ ಪೊಲೀಸರು ಕ್ರಮ ವಹಿಸುತ್ತಾರೆ. ಕಾನೂನು ಎಲ್ಲರಿಗೂ ಒಂದೇ ಇಲ್ಲಿ ಉಪೇಂದ್ರ, ಸಚಿವ ಮಲ್ಲಿಕಾರ್ಜುನ್ ಎಂಬ ಬೇಧ ಭಾವ ಇಲ್ಲ ಎಂದರು.