ಆರೋಪ ಸಾಬಿತಾದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ; ಸಿಎಂಗೆ ಪತ್ರ ಬರೆದ ಶಾಸಕ ಬಿಆರ್ ಪಾಟೀಲ್
ಕಲಬುರಗಿ: ನನ್ನ ಮೇಲಿನ ಆರೋಪ ಸಾಬೀತಾದರೆ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಆಳಂದ ಕ್ಷೇತ್ರದ ಶಾಸಕ ಬಿಆರ್ ಪಾಟೀಲ್ ಸಿಎಂ ಸಿದ್ದರಾಮಯ್ಯ ಪತ್ರ ಬರೆದು ಸಿಎಂಗೆ ರಾಜೀನಾಮೆ ನೀಡುವ ಸುಳಿವು ನೀಡಿದ್ದಾರೆ. ಬಿ.ಆರ್ ಪಾಟೀಲ್ ಅವರ ಪತ್ರ ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿದೆ.
2013ರಲ್ಲಿ ಕಾಮಗಾರಿಗಳನ್ನು ನಾನು ಕೆಆರ್ ಐಡಿಎಲ್ ಗೆ ನೀಡಿದ್ದೆ. ಆದರೆ ಕಾರಣಾಂತರಗಳಿಂದ ಅವು ಪೂರ್ಣವಾಗಿಲ್ಲ. ಈ ಬಗ್ಗೆ ನಾನು ಕಳೆದ ಅಧಿವೇಶನದಲ್ಲಿ ಪ್ರಸ್ತಾಪ ಮಾಡಿದಾಗ ನನ್ನನ್ನೇ ಅನುಮಾನದಿಂದ ನೋಡಲಾಯಿತು. ಸಚಿವ ಪ್ರಿಯಾಂಕ್ ಖರ್ಗೆ ಅನುಪಸ್ಥಿತಿಯಲ್ಲಿ ಸಚಿವ ಕೃಷ್ಣ ಭೈರೇಗೌಡ ನನ್ನ ಮೇಲೆ ಅನುಮಾನ ಬರುವಂತೆ ಮಾತನಾಡಿದರು.
ಕೆಆರ್ ಐಡಿಎಲ್ ಕಡೆಯಿಂದ ನಾನು ಹಣ ಪಡೆದು ಭೂಸೇನೆಗೆ ಕಾಮಗಾರಿ ಕೊಟ್ಟಿದ್ದೇನೆ ಎನ್ನುವ ಅರ್ಥದಲ್ಲಿ ಹೇಳಿಕೆ ಕೊಟ್ಟರು. ಅದಾದ ಮೇಲೂ ಪ್ರಿಯಾಂಕ್ ಖರ್ಗೆ ಕಾಮಗಾರಿಗಳ ಕುರಿತು ಸಭೆ ನಡೆಸಲಿಲ್ಲ. ಇಂಥ ಆರೋಪ ಹೊತ್ತು ನಾನು ಅಧಿವೇಶನಕ್ಕೆ ಹಾಜರಾಗುವುದು ಸರಿಯಲ್ಲ. ಆರೋಪಗಳನ್ನು ಹೊತ್ತು ಸದನಕ್ಕೆ ಬಂದರೆ ನಾನು ಆರೋಪ ಒಪ್ಪಿಕೊಂಡಂತೆ ಆಗುತ್ತದೆ.
ಹೀಗಾಗಿ ನನ್ನ ಮೇಲೆ ಬಂದ ಆರೋಪದ ಬಗ್ಗೆ ತನಿಖೆ ನಡೆಸಿ. ಸತ್ಯಾಸತ್ಯತೆ ಹೊರ ಬರಲು ತನಿಖೆಗೆ ಆದೇಶ ನೀಡಿ. ಆರೋಪ ಸಾಬೀತಾದರೆ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ದನಿದ್ದೇನೆ ಎಂದು ಬಿಆರ್ ಪಾಟೀಲ್ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.