ʼಬಸ್ಸಿಗೆ ಕಲ್ಲು ಹೊಡೆದ್ರೆ, ಬೆಂಕಿ ಹಚ್ಚಿದ್ರೆ ಮೀಸಲಾತಿ ಕೊಡ್ತಾರೆ...ʼ: ಹಡಪದ ಅಣ್ಣಪ್ಪ ಸ್ವಾಮೀಜಿಯ ಹೇಳಿಕೆಯ ವೀಡಿಯೊ ವೈರಲ್
ಬೆಂಗಳೂರು: ಮೀಸಲಾತಿಗೆ ಸಂಬಂಧಿಸಿದಂತೆ ಮುದ್ದೆಬಿಹಾಳ್ ತಂಗಡಗಿ ಹಡಪದ ಮಠದ ಶ್ರೀ ಅನ್ನದಾನಿ ಭಾರತಿ ಹಡಪದ ಅಣ್ಣಪ್ಪ ಸ್ವಾಮೀಜಿಗಳ ವಿವಾದಾತ್ಮಕ ಹೇಳಿಕೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ದಾವಣಗೆರೆಯಲ್ಲಿ ಅ.3 ರಂದು ನಡೆದ ಹಡಪದ ಜಯಂತಿ, ಜನಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಹಡಪದ ಅಪ್ಪಣ್ಣ ಸ್ವಾಮೀಜಿ , ʼʼಯಾರು ಸಹ ಕರೆದು ಮೀಸಲಾತಿ ಸೌಲಭ್ಯ ಕೊಡೋದಿಲ್ಲ. ನಮ್ಮ ಮಕ್ಕಳ ಭವಿಷ್ಯಕ್ಕಾಗಿ ಹೋರಾಟ ಅವಶ್ಯಕವಾಗಿದೆ. ಹಡಪದ ಸಮುದಾಯದ 2ಎ ಮೀಸಲಾತಿಗಾಗಿ ಹೋರಾಟ ಮಾಡಬೇಕಿದೆ. ಮಕ್ಕಳ ಭವಿಷ್ಯ ಉಜ್ವಲ ಆಗಬೇಕು ಎಂದರೆ ಬೀದಿಗೆ ಇಳಿಯಿರಿ. ಬೀದಿಗೆ ಇಳಿದು ಕಲ್ಲು ತೂರಿ, ಬೆಂಕಿ ಹಚ್ಚಿರಿ. ಇಲ್ಲದಿದ್ದರೆ ಸೌಲಭ್ಯ ಕೊಡುತ್ತೇವೆ ಎಂದು ಯಾರೂ ಮುಂದೆ ಬರಲ್ಲ. ತಡ ಮಾಡದೇ ಹೋರಾಟ ಮಾಡಬೇಕಿದೆʼʼ ಎಂದು ಹೇಳಿರುವುದು ವೀಡಿಯೊದಲ್ಲಿ ದಾಖಲಾಗಿದೆ.
ಮಾಯಕೊಂಡ ಕಾಂಗ್ರೆಸ್ ಶಾಸಕ ಕೆ.ಎಸ್. ಬಸವಂತಪ್ಪ, ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಮಹಾಪೀಠದ ಬಸವ ಜಯ ಮೃತ್ಯುಂಜಯ ಶ್ರೀಗಳು ಹಡಪದ ಅಣ್ಣಪ್ಪ ಸ್ವಾಮೀಜಿಗಳ ಜೊತೆ ವೇದಿಕೆಯಲ್ಲಿ ಕುಳಿತಿರುವುದು ವೈರಲ್ ವೀಡಿಯೊದಲ್ಲಿ ಕಾಣಿಸುತ್ತದೆ.
ವೈರಲ್ ವೀಡಿಯೊ ಇಲ್ಲಿದೆ...