ಬೆಂಗಳೂರು ನಗರದಲ್ಲಿ ಅಕ್ರಮ ಜಾಹೀರಾತು: 264 ಎಫ್‍ಐಆರ್ ದಾಖಲು
ಹೈಕೋರ್ಟ್‌ಗೆ ಬಿಬಿಎಂಪಿ ಪ್ರಮಾಣ ಪತ್ರ
ಬೆಂಗಳೂರು, ಆ.31: ರಾಜಧಾನಿ ಬೆಂಗಳೂರು ನಗರದಲ್ಲಿ ಅಕ್ರಮ ಜಾಹೀರಾತು ಅಳವಡಿಸಿದ್ದ ವ್ಯಕ್ತಿಗಳ ವಿರುದ್ಧ ಒಟ್ಟು 264 ಎಫ್‍ಐಆರ್‍ಗಳನ್ನು ದಾಖಲಿಸಲಾಗಿದೆ ಎಂದು ಬಿಬಿಎಂಪಿ ಹೈಕೋರ್ಟ್‍ಗೆ ತಿಳಿಸಿದೆ.
ಈ ಸಂಬಂಧ ಮಾಯಿಗೇಗೌಡ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ವಿಭಾಗೀಯ ನ್ಯಾಯಪೀಠವು ವಿಚಾರಣೆ ನಡೆಸಿತು.
ಅಕ್ರಮ ಜಾಹೀರಾತುಗಳ ಹಾವಳಿಯನ್ನು ತಡೆಯುವ ನಿಟ್ಟಿನಲ್ಲಿ ಪ್ರತಿಯೊಂದು ಅಕ್ರಮ ಜಾಹೀರಾತು ಅಳವಡಿಕೆಗೆ ಬಿಬಿಎಂಪಿ ಮತ್ತು ರಾಜ್ಯ ಸರಕಾರಕ್ಕೆ ತಲಾ 50 ಸಾವಿರ ದಂಡ ವಿಧಿಸಲು ಹೈಕೋರ್ಟ್ ನೀಡಿರುವ ಸೂಚನೆಯನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ ಎಂದು ಬಿಬಿಎಂಪಿ ಹೇಳಿದೆ.
ವಿಚಾರಣೆ ವೇಳೆ ಬಿಬಿಎಂಪಿ ಪರ ವಕೀಲ ಎನ್.ಕೆ.ರಮೇಶ್ ಅವರು ಈ ಸಂಬಂಧ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರ ಪ್ರಮಾಣ ಪತ್ರವನ್ನು ನ್ಯಾಯಪೀಠಕ್ಕೆ ಸಲ್ಲಿಸಿ, ಕೈಗೊಂಡಿರುವ ಕ್ರಮ ಮತ್ತು ಯೋಜನೆಗಳನ್ನು ವಿವರಿಸಿದರು.
ಪ್ರಮಾಣ ಪತ್ರದ ವಿವರ: ಅಕ್ರಮ ಜಾಹೀರಾತುಗಳ ಅಳವಡಿಕೆ ಮಹಾನಗರದಲ್ಲಿ ಒಂದು ಉಪಟಳವಾಗಿ ಪರಿಣಮಿಸಿದೆ. ಅದನ್ನು ತಡೆಯಲು ಬಿಬಿಎಂಪಿ ಅಧಿಕಾರಿಗಳು ಹೊಸ ವಿಧಾನಗಳಡಿ ಮತ್ತು ಹೆಚ್ಚು ಕಟ್ಟುನಿಟ್ಟಾದ ಕ್ರಿಯಾ ಯೋಜನೆ ರೂಪಿಸಿದ್ದಾರೆ. ಈ ಮೂಲಕ ಭವಿಷ್ಯದಲ್ಲಿ ಅನಧಿಕೃತ ಫ್ಲೆಕ್ಸ್‍ಗಳು, ಬ್ಯಾನರ್‍ಗಳನ್ನು ಅಕ್ರಮವಾಗಿ ಅಳವಡಿಸುವುದನ್ನು ಸಂಪೂರ್ಣವಾಗಿ ತಡೆಯಲು ಶ್ರಮಿಸುತ್ತಿದ್ದಾರೆ ಎಂದು ಪ್ರಮಾಣ ಪತ್ರದಲ್ಲಿ ವಿವರಿಸಲಾಗಿದೆ.