ಅಕ್ರಮ ಗಣಿಗಾರಿಕೆ ಪ್ರಕರಣ: ಎಸ್‍ಐಟಿ ಅವಧಿ ವಿಸ್ತರಣೆಗೆ ಸಂಪುಟ ಅನುಮೋದನೆ
ಬೆಂಗಳೂರು, ನ.16: ರಾಜ್ಯದಲ್ಲಿನ ಅಕ್ರಮ ಗಣಿಗಾರಿಕೆ ಪ್ರಕರಣಗಳ ತನಿಖೆ ನಡೆಸಲು ಲೋಕಾಯುಕ್ತದಲ್ಲಿ ರಚನೆ ಮಾಡಿರುವ ವಿಶೇಷ ತನಿಖಾ ತಂಡ (ಎಸ್‍ಐಟಿ)ದ ಅವಧಿಯನ್ನು 2024ರ ಜೂ.30ರ ವರೆಗೆ ವಿಸ್ತರಣೆ ಮಾಡಲು ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು.
ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಳೆದ ಐದು ವರ್ಷಗಳಲ್ಲಿ ನವ ಮಂಗಳೂರು, ಕಾರವಾರ, ಮರ್ಮಗೋವ, ಪಣಜಿ ಮತ್ತು ಚೆನ್ನೈ ಬಂದರುಗಳಿಗೆ ಸಂಬಂಧಿಸಿದ 172 ಪ್ರಕರಣಗಳಲ್ಲಿ ಪ್ರಾಥಮಿಕ ತನಿಖೆಯೆ ಆರಂಭವಾಗಿಲ್ಲ ಎಂದರು.
10 ಕ್ರಿಮಿನಲ್ ಪ್ರಕರಣಗಳ ತನಿಖೆ ಬಾಕಿ ಇದೆ. ಅಲ್ಲದೆ, ಅದಿರು ಮೌಲ್ಯ ಮಾಪನ ಸಮಿತಿಯಿಂದ ಅದಿರು ಮೌಲ್ಯಮಾಪನ ವರದಿಗಳು ಬಂದಿಲ್ಲ. ವಿಚಾರಣಾ ನ್ಯಾಯಾಲಯಗಳಲ್ಲಿ ವಿಚಾರಣೆಯ ಹಂತದಲ್ಲಿರುವ 59 ಪ್ರಕರಣಗಳ ಶೀಘ್ರ ವಿಲೇವಾರಿಗಾಗಿ ಎಸ್‍ಐಟಿ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ ಎಂದು ಅವರು ಹೇಳಿದರು.
ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಎಲ್ಲ ಸಗಟು ಗೋದಾಮುಗಳಲ್ಲಿ ಸಿ.ಸಿ.ಟಿ.ವಿ.ಗಳನ್ನು ಅಳವಡಿಸಲು 12.44 ಕೋಟಿಗಳ ಅಂದಾಜು ಮೊತ್ತದಲ್ಲಿ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ (ಕೆ.ಟಿ.ಪಿ.ಪಿ) ಕಾಯ್ದೆಯನ್ವಯ ಟೆಂಡರ್ ಕರೆಯಲು ಸಚಿವ ಸಂಪುಟ ಅನುಮೋದಿಸಿದೆ ಎಂದು ಎಚ್.ಕೆ.ಪಾಟೀಲ್ ಹೇಳಿದರು.
ಮೈಸೂರು ನಗರಾಭಿವೃಧ್ಧಿ ಪ್ರಾಧಿಕಾರದ ಲೋಕಲ್ ಪ್ಲಾನಿಂಗ್ ಏರಿಯಾ ವ್ಯಾಪ್ತಿಯಲ್ಲಿನ ನಂಜನಗೂಡು ಮತ್ತು ಶ್ರೀರಂಗ ಪಟ್ಟಣ ತಾಲ್ಲೂಕಿನ ಗ್ರಾಮಗಳಲ್ಲಿ 44 ಕೋಟಿ ರೂ.ಗಳ ಪ್ರಸ್ತಾಪಿತ ಅಭಿವೃದ್ಧಿ ಕಾಮಗಾರಿಗಳ ಮತ್ತು ತ್ಯಾಜ್ಯ ನೀರು ಸಂಸ್ಕರಣಾ ಘಟಕದ ಭೂಸ್ವಾಧೀನ ವೆಚ್ಚಗಳನ್ನು ಅಭಿವೃದ್ಧಿ ನಿಧಿ-1 ರಲ್ಲಿ ಭರಿಸಲು ಮತ್ತು ಪ್ರಾಧಿಕಾರದ ವತಿಯಿಂದ ಟೆಂಡರ್ ಆಹ್ವಾನಿಸಿ ಅನುಷ್ಠಾನಗೊಳಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಅವರು ಹೇಳಿದರು.
ಗದಗ-ಬೆಟಗೇರಿ ನಗರಸಭೆಗೆ ಅಮೃತ 2.0 ಯೋಜನೆಯಡಿ ಅಂದಾಜು ಮೊತ್ತ 34 ಕೋಟಿ ರೂ.ವೆಚ್ಚದಲ್ಲಿ ಕುಡಿಯುವ ನೀರು ಸರಬರಾಜು ಯೋಜನೆಯನ್ನು ಅನುಷ್ಠಾನಗೊಳಿಸಲು ಸಚಿವ ಸಂಪುಟ ಅನುಮೋದಿಸಿದೆ. ಅಮೃತ 2.0 ಯೋಜನೆ ಘಟಕವಾದ ಜಲ ಮೂಲಗಳ ಪುನಃಶ್ಚೇತನ ಹಾಗೂ ಉದ್ಯಾನವನ ಮತ್ತು ಹಸಿರು ಜಾಗ ಅಭಿವೃದ್ಧಿ ಕಾಮಗಾರಿಗಳನ್ನು ರಾಜ್ಯದ 1 ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆವುಳ್ಳ ನಗರ ಸ್ಥಳೀಯ ಸಂಸ್ಥೆಗಳಲ್ಲಿಯೂ ಅನುಷ್ಠಾನಗೊಳಿಸಲು ಸಚಿವ ಸಂಪುಟ ಅನುಮೋದಿಸಿದೆ ಎಂದು ಅವರು ಹೇಳಿದರು.
ಗದಗ-ಬೆಟಗೇರಿ ನಗರಸಭೆಯ ಸ್ವತ್ತಾಗಿರುವ ಸುಮಾರು 34 ಎಕರೆ 32 ಗುಂಟೆ ವಿಸ್ತೀರ್ಣದ ಭೂಮಿಯು ಲಭ್ಯವಿರುವುದರಿಂದ ಗದಗ ನಗರದಲ್ಲಿ ವ್ಯಾಪಾರ, ಸಂಸ್ಕøತಿ ಮತ್ತು ವಸ್ತು ಪ್ರದರ್ಶನ ಕೇಂದ್ರ ಸ್ಥಾಪಿಸುವ ಉದ್ದೇಶದಿಂದ ಪ್ರಾಧಿಕಾರ ರಚಿಸಲು ಮುಂದಿನ ಅಧಿವೇಶನದಲ್ಲಿ ವಿಧೇಯಕ ಮಂಡಿಸಲು ನಿರ್ಧರಿಸಲಾಗಿದೆ. ಈ ಯೋಜನೆಯನ್ನು ಪಿ.ಪಿ.ಪಿ ಮಾದರಿಯಲ್ಲಿ ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ ಎಂದು ಎಚ್.ಕೆ.ಪಾಟೀಲ್ ಹೇಳಿದರು.
ಎನ್.ಜಿ.ಟಿ. ನಿರ್ದೇಶನದಂತೆ ಬಳಸಿದ ನೀರು ನಿರ್ವಹಣಾ ಯೋಜನೆಯ ಹಂತ-2 ರಲ್ಲಿ ಕೆ.ಯು.ಐ.ಡಿ.ಎಫ್.ಸಿ. ವತಿಯಿಂದ 17 ಆದ್ಯತೆಯ ನಗರ ಸ್ಥಳೀಯ ಸಂಸ್ಥೆಗಳು, ಪಟ್ಟಣಗಳಲ್ಲಿ ಕೊಳಚೆ ನೀರಿನ ಉತ್ಪಾದನೆ ಮತ್ತು ಅದರ ಸಂಸ್ಕರಣೆ ನಡುವಿನ ಅಂತರವನ್ನು ಕಡಿಮೆ ಮಾಡುವ ಸಲುವಾಗಿ ಎನ್.ಜಿ.ಟಿ. ಪರಿಸರ ಪರಿಹಾರ ನಿಧಿ ಅಡಿಯಲ್ಲಿ 750 ಕೋಟಿ ರೂ.ವೆಚ್ಚದಲ್ಲಿ ಒಳಚರಂಡಿ ವ್ಯವಸ್ಥೆಯ ನಿರ್ಮಾಣ, ಉನ್ನತೀಕರಣ ಕಾಮಗಾರಿಗಳನ್ನು ಕೈಗೊಳ್ಳಲು ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಅವರು ಹೇಳಿದರು.
ದೈಹಿಕ ವಿಕಲಚೇತನರಿಗೆ ಉದ್ಯೋಗ ಕೈಗೊಳ್ಳಲು ಅಥವಾ ಅವರು ಉದ್ಯೋಗ ನಿರ್ವಹಿಸುವ ಸ್ಥಳಕ್ಕೆ, ಉನ್ನತ ಶಿಕ್ಷಣ ಕಾಲೇಜುಗಳಿಗೆ ಹೋಗಿ ಬರಲು ಅನುಕೂಲವಾಗುವಂತೆ 4 ಸಾವಿರ ರೆಟ್ರೋಫಿಟೆಡ್ ಯಂತ್ರಚಾಲಿತ ದ್ವಿಚಕ್ರ ವಾಹನಗಳನ್ನು 36 ಕೋಟಿ ರೂ.ವೆಚ್ಚದಲ್ಲಿ ಟೆಂಡರ್ ಮೂಲಕ ಖರೀದಿಸಿ ವಿತರಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಎಚ್.ಕೆ.ಪಾಟೀಲ್ ಹೇಳಿದರು.
2023-24ನೆ ಸಾಲಿನ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಜ್ಯದ ರೈತರಿಂದ 4 ಲಕ್ಷ ಮೆಟ್ರಿಕ್ ಟನ್ ರಾಗಿ ಸಂಗ್ರ್ರಹಿಸಲು ಅಗತ್ಯವಿರುವ 80 ಲಕ್ಷ ಗೋಣಿ ಚೀಲಗಳನ್ನು, ಸೆಣಬು ದಾರವನ್ನೊಳಗೊಂಡಂತೆ ಖರೀದಿಸಿಸಲು 76 ಕೋಟಿ ರೂ.ಗಳ ಅನುದಾನ ಮಿತಿಗೊಳಪಡಿಸಿ ಮುಕ್ತ ಟೆಂಡರ್ ಕರೆಯಲು ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಅವರು ಹೇಳಿದರು.
ರಾಜ್ಯದ ಎಲ್ಲ ನಗರ ಸ್ಥಳೀಯ ಸಂಸ್ಥೆಗಳ ಪಟ್ಟಣಗಳಲ್ಲಿ (ಬಿಬಿಎಂಪಿ ಹೊರತುಪಡಿಸಿ) 188 ಇಂದಿರಾ ಕ್ಯಾಂಟೀನ್‍ಗಳನ್ನು ಅನುಮೋದಿತ ಮಾದರಿ ವಿನ್ಯಾಸದ ಪ್ರಕಾರ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ಕಾಯ್ದೆಯ ಕಲಂ 4(ಜಿ) ವಿನಾಯತಿ ನೀಡಿ ಒಟ್ಟು ವೆಚ್ಚ 154.59 ಕೋಟಿ ರೂ.ಗಳಲ್ಲಿ ಅನುಷ್ಠಾನಗೊಳಿಸಲು ಅನುಮೋದನೆ ನೀಡಲಾಗಿದೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.
ರಾಜ್ಯ ಮಾನವ ಹಕ್ಕುಗಳ ಆಯೋಗ ರಚನೆ ಮಾಡುವ ಸಂಬಂಧ ರಾಜ್ಯಪಾಲರಿಗೆ ಪ್ರಸ್ತಾವ ಸಲ್ಲಿಸಲಾಗಿದೆ. ಈ ಸಂಬಂಧ ಇಂದು ರಾಜ್ಯಪಾಲರನ್ನು ಭೇಟಿ ಮಾಡಿ ಚರ್ಚೆ ನಡೆಸಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು.