ಡಿಕೆಶಿ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣ: ವಿಚಾರಣೆ ನ.29ಕ್ಕೆ ಮುಂದೂಡಿದ ಹೈಕೋರ್ಟ್
ಬೆಂಗಳೂರು: ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣವನ್ನು ಕೇಂದ್ರೀಯ ತನಿಖಾ ದಳದ(ಸಿಬಿಐ) ತನಿಖೆಗೆ ನೀಡಿದ್ದ ಆದೇಶ ರದ್ದು ಕೋರಿರುವ ಮೇಲ್ಮನವಿಯ ವಿಚಾರಣೆಯನ್ನು ಹೈಕೋರ್ಟ್ ನ.29ಕ್ಕೆ ಮುಂದೂಡಿದೆ.
ತಮ್ಮ ವಿರುದ್ಧ ತನಿಖೆಗೆ ಅನುಮತಿ ನೀಡಿದ್ದ ಕ್ರಮವನ್ನು ಪ್ರಶ್ನಿಸಿ ಶಿವಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ಏಕಸದಸ್ಯ ಪೀಠ ವಜಾಗೊಳಿಸಿದ್ದ ಕ್ರಮ ಪ್ರಶ್ನಿಸಿ ಮೇಲ್ಮನವಿ ಅರ್ಜಿ ಸಲ್ಲಿಕೆ ಮಾಡಿದ್ದರು.
ಈ ಮೇಲ್ಮನವಿ ಅರ್ಜಿಯ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ನೇತೃತ್ವದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು. ಬುಧವಾರ ಬೆಳಗ್ಗೆ ನ್ಯಾಯಾಲಯದ ಕಲಾಪ ಪ್ರಾರಂಭವಾಗುತ್ತಿದ್ದಂತೆ ಕೇಂದ್ರ ಸರಕಾರದ (ಸಿಬಿಐ) ಪರ ವಾದ ಮಂಡಿಸುವುದಕ್ಕೆ ಕಾಲಾವಕಾಶ ಬೇಕು ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ.ರಾಜು ಮನವಿ ಮಾಡಿದರು.
ಮಧ್ಯಾಹ್ನ ಮತ್ತೆ ಅರ್ಜಿ ವಿಚಾರಣೆಗೆ ಬಂದ ಸಂದರ್ಭದಲ್ಲಿ ಅರ್ಜಿದಾರರ ಪರ ವಕೀಲರು ಕಾಲಾವಕಾಶ ಕೋರಿದರು. ಈ ಅಂಶವನ್ನು ಪರಿಗಣಿಸಿದ ನ್ಯಾಯಪೀಠ, ವಿಚಾರಣೆ ಮುಂದೂಡಿತು.
ಅಕ್ರಮ ಆಸ್ತಿ ಗಳಿಕೆಗೆ ಸಂಬಂಧಿಸಿದಂತೆ ಭ್ರಷ್ಟಾಚಾರ ನಿಯಂತ್ರಣ ಕಾಯಿದೆಯ ವಿವಿಧ ಸೆಕ್ಷನ್ ಗಳ ಅಡಿ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿ.ಕೆ.ಶಿವಕುಮಾರ್ ವಿರುದ್ಧ ದಾಖಲಾಗಿದ್ದ ಪ್ರಕರಣದ ತನಿಖೆ ನಡೆಸಲು ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದ ಸರಕಾರ ಸಿಬಿಐಗೆ ಒಪ್ಪಿಸಿ ಆದೇಶಿಸಿತ್ತು.
ಈ ಆದೇಶ ವಜಾ ಮಾಡಲು ನಿರಾಕರಿಸಿದ್ದ ಕರ್ನಾಟಕ ಏಕಸದಸ್ಯ ಪೀಠದ ಆದೇಶಕ್ಕೆ ಮುಂದಿನ ವಿಚಾರಣೆಯವರೆಗೆ ತಡೆ ನೀಡಲಾಗಿದೆ ಎಂದು 2023ರ ಜೂ.12ರಂದು ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ಅವರ ನೇತೃತ್ವದ ವಿಭಾಗೀಯ ಪೀಠ ಆದೇಶಿಸಿತ್ತು.
ಪ್ರಕರಣವೇನು?: ಡಿ.ಕೆ.ಶಿವಕುಮಾರ್ ಅವರು ಗಣಿಗಾರಿಕೆ ಮತ್ತು ರಿಯಲ್ ಎಸ್ಟೇಟ್ ಉದ್ಯಮ ಸೇರಿದಂತೆ ಹಲವು ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದು, ಅವರಿಗೆ ಸೇರಿದ ವಿವಿಧ ಸ್ಥಳಗಳಲ್ಲಿ 2017ರ ಆ.2ರಂದು ಆದಾಯ ತೆರಿಗೆ ಇಲಾಖೆ(ಐಟಿ) ದಾಳಿ ನಡೆಸಿತ್ತು. ಈ ವೇಳೆ 8.59 ಕೋಟಿ ರೂ.ಹಣ ಪತ್ತೆಯಾಗಿತ್ತು. ಡಿಕೆಶಿ ಅವರಿಗೆ ಸೇರಿದ ವಸತಿ ಕಟ್ಟಡವೊಂದರಲ್ಲಿ 41 ಲಕ್ಷ ರೂ.ಪತ್ತೆಯಾಗಿತ್ತು.
ಇದರ ಬೆನ್ನಿಗೇ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದರು. ಆ ಬಳಿಕ ಜಾರಿ ನಿರ್ದೇಶನಾಲಯವು ಶಿವಕುಮಾರ್ ಅವರ ವಿರುದ್ಧ ಅಕ್ರಮ ಹಣ ವರ್ಗಾವಣೆ ಕಾಯಿದೆ ಅಡಿ ಪ್ರಕರಣ ದಾಖಲಿಸಿತ್ತು. ಇದನ್ನು ಆಧರಿಸಿ 2019ರ ಸೆ.3ರಂದು ಶಿವಕುಮಾರ್ ಅವರನ್ನು ಬಂಧಿಸಲಾಗಿತ್ತು. ಆನಂತರ 2019ರ ಸೆ.9ರಂದು ಜಾರಿ ನಿರ್ದೇಶನಾಲಯದ ಪತ್ರ ಆಧರಿಸಿ, ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಅಡಿ ತನಿಖೆ ನಡೆಸಲು ಸಿಬಿಐಗೆ ಪ್ರಕರಣವನ್ನು ಒಪ್ಪಿಸಿ ರಾಜ್ಯ ಸರಕಾರವು ಆದೇಶಿಸಿತ್ತು.