ಅಂಗನವಾಡಿ ಕೇಂದ್ರಗಳಿಗೆ ಕಳಪೆ ಆಹಾರ ಪೂರೈಕೆದಾರರ ವಿರುದ್ಧ ಮುಲಾಜಿಲ್ಲದೆ ಕ್ರಮ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್
ಬೆಂಗಳೂರು, ಜು.14: ರಾಜ್ಯದಲ್ಲಿರುವ ಕೆಲ ಅಂಗನವಾಡಿ ಕೇಂದ್ರಗಳಿಗೆ ಪೂರೈಕೆ ಮಾಡುತ್ತಿರುವ ಆಹಾರ ಧಾನ್ಯಗಳು ಕಳಪೆ ಮಟ್ಟದಿಂದ ಕೂಡಿದ್ದು, ಇಂತಹ ಆಹಾರ ಧಾನ್ಯ ಪೂರೈಕೆದಾರರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ಶುಕ್ರವಾರ ವಿಧಾನ ಪರಿಷತ್ತಿನ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಸದಸ್ಯ ವೈ.ಎ ನಾರಾಯಣಸ್ವಾಮಿ ಪ್ರಶ್ನೆಗೆ ಉತ್ತರಿಸಿದ ಅವರು, ಅಂಗನವಾಡಿ ಮಕ್ಕಳಿಗೆ ಪೂರೈಕೆ ಮಾಡುತ್ತಿರುವ ಕಳಪೆ ಗುಣಮಟ್ಟದ ಕಾಳು, ಮೊಟ್ಟೆ ಸೇರಿದಂತೆ ಇನ್ನಿತರ ಆಹಾರ ಪದಾರ್ಥಗಳ ಬಗ್ಗೆ ಸಮಗ್ರ ವರದಿಯನ್ನು ತರಿಸಿಕೊಳ್ಳಲಾಗಿದೆ. ಅದನ್ನು ಪರಿಶೀಲಿಸಿ ಎಲ್ಲೆಲ್ಲಿ ಲೋಪವಾಗಿದೆಯೋ ಅಲ್ಲಲ್ಲಿ ಮುಲಾಜಿಲ್ಲದೆ ಕ್ರಮಕೈಗೊಳ್ಳಲಾಗುವುದು. ಹಾಗೆಯೇ ಕಳಪೆ ಆಹಾರ ಪೂರೈಕೆದಾರರಿಗೆ ವಿರುದ್ಧ ನೋಟಿಸ್ ನೀಡಿದ್ದು, ಪೂರೈಕೆ ಮಾಡದಂತೆ ತಡೆಯಲಾಗಿದೆ ಎಂದು ತಿಳಿಸಿದರು.
ತಾಯಿಯ ಹೊಟ್ಟೆಯಲ್ಲಿ ಮಗು 6 ತಿಂಗಳು ಇರುವಾಗಿನಿಂದ 6 ವರ್ಷದತನಕ ಪೌಷ್ಠಿಕಾಂಶದ ಆಹಾರ ನೀಡಲು ಸರಕಾರ ಕ್ರಮಕೈಗೊಂಡಿದೆ. ಆದರೂ ಆಹಾರ ಪೂರೈಕೆದಾರರು ಕಳಪೆ ಆಹಾರ ನೀಡುತ್ತಿರುವುದು ಖೇದಕರ. ತಪಾಸಣೆ ವೇಳೆ ಕಳಪೆ ಆಹಾರ ಪದಾರ್ಥಗಳನ್ನು ಕಂಡು ಬೆಚ್ಚಿ ಬಿದ್ದಿದ್ದೇನೆ. ಈ ರೀತಿ ಆಹಾರ ಪೂರೈಕೆಯಾಗುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಅವರು ಹೇಳಿದರು.
ಆಹಾರ ಪೂರೈಕೆ ವಿಕೇಂದ್ರಿಕರಣದ ಮೂಲಕ ಮಾಡುತ್ತಿದ್ದು, ಕೇಂದ್ರೀಕೃತ ವ್ಯವಸ್ಥೆ ಜಾರಿಗೆ ತರುವ ಉದ್ದೇಶವೂ ಇದೆ. ಕಲಬುರಗಿ, ಹಾಸನ, ಕೊಡಗು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಆಹಾರ ಪೂರೈಕೆ ಮಾಡುತ್ತಿರುವ ಎಂಎಸ್‍ಪಿಟಿಸಿ ಕೇಂದ್ರದಲ್ಲಿ ಅವ್ಯವಹಾರದಲ್ಲಿ ಭಾಗಿಯಾಗಿದ್ದ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಲು ಜಿಲ್ಲಾಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಅಂಗನವಾಡಿ ಕೇಂದ್ರಗಳಲ್ಲಿ ಪ್ರತಿದಿನ ಪೌಷ್ಠಿಕಾಂಶದ ಆಹಾರ ನೀಡಲು ಪ್ರತಿ ಮಗುವಿಗೆ ತಲಾ 8 ರೂ.ನಂತೆ 300 ದಿನಗಳ ಪೂರಕ ಪೌಷ್ಠಿಕ ಆಹಾರ ನೀಡಲಾಗುತ್ತಿದೆ. ಹಿಂದಿನ 3 ವರ್ಷಗಳಿಂದ ಪ್ರತಿದಿನ ನೀಡುತ್ತಿರುವ 8 ರೂ.ಗಳನ್ನು ಪರಿಷ್ಕರಿಸಿಲ್ಲ. ಇದನ್ನು ಹೆಚ್ಚಿಸಲು ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.
ರಾಜ್ಯದಲ್ಲಿ 67,570 ಅಂಗನವಾಡಿ ಕೇಂದ್ರಗಳು, 2,329 ಮಿನಿ ಅಂಗನವಾಡಿಗಳೂ ಸೇರಿ ಒಟ್ಟಾರೆ 69,899 ಅಂಗನವಾಡಿಗಳಲ್ಲಿ ಮೂರು ವರ್ಷದಿಂದ 6 ವರ್ಷದೊಳಗಿನ 39,50,179 ಮಕ್ಕಳು ಸೌಲಭ್ಯ ಪಡೆಯುತ್ತಿದ್ದಾರೆ. ಅಂಗನವಾಡಿಗಳಲ್ಲಿ ವಾರದಲ್ಲಿ 3 ದಿನ ಮೊಟ್ಟೆ, 3 ದಿನ 200 ಎಂಎಲ್ ಹಾಲು, ಮೊಟ್ಟೆ ಸ್ವೀಕರಿಸದ ಮಕ್ಕಳಿಗೆ ವಾರದಲ್ಲಿ 6 ದಿನ ಹಾಲು ನೀಡಲಾಗುತ್ತಿದೆ ಎಂದು ಅವರು ಹೇಳಿದರು.