ಬೆಂಗಳೂರು | ನಿರಂತರ ಮಳೆಯಿಂದ ಉದ್ಯಮಗಳ ಮೇಲೆ ಪರಿಣಾಮ : ಡಿಸಿಎಂ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ
ಬೆಂಗಳೂರು : ನಿರಂತರ ಮಳೆಯಿಂದಾಗಿ ನಗರದಲ್ಲಿನ ಐಟಿ ಕಂಪೆನಿಗಳು ಸೇರಿದಂತೆ ಉದ್ಯಮಗಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದ್ದು, ಪರಿಸ್ಥಿತಿಯನ್ನು ಅವಲೋಕಿಸಿ ಸೂಕ್ತ ಪರಿಹಾರೋಪಾಯಗಳನ್ನು ಕಲ್ಪಿಸಲು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ಸಮಿತಿಯಲ್ಲಿ ಐಟಿ, ಬಿಟಿ ಮತ್ತು ಸ್ಟಾರ್ಟಪ್ ವಿಷನ್ ಗ್ರೂಪ್‍ಗಳ ಮುಖ್ಯಸ್ಥರು ಸದಸ್ಯರಾಗಿದ್ದಾರೆ.
ಬುಧವಾರ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಪ್ರಕಟನೆ ಹೊರಡಿಸಿದ್ದು, ವಾತಾವರಣ ವೈಪರೀತ್ಯದಿಂದಾಗಿ ನಗರದಲ್ಲಿ ಭಾರೀ ಮಳೆಯಾಗಿ ಜನಜೀವನ ಜರ್ಜರಿತವಾಗಿದೆ. ಐಟಿ ಕಂಪೆನಿಗಳು ಹಾಗೂ ಉದ್ಯೋಗಿಗಳು ತೊಂದರೆಗೀಡಾಗಿದ್ದಾರೆ. ಹೀಗಾಗಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಸಮಿತಿ ರಚಿಸಿದ್ದಾರೆ ಎಂದು ತಿಳಿಸಿದ್ದಾರೆ.
ಸಮಿತಿ ರಚನೆ: ಉಪಮುಖ್ಯಂತ್ರಿ ಡಿ.ಕೆ.ಶಿವಕುಮಾರ್ ಸಮಿತಿಯ ಅಧ್ಯಕ್ಷರಾಗಿದ್ದು, ವಿದ್ಯುನ್ಮಾನ ಮಾಹಿತಿ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಚಿವ ಪ್ರಿಯಾಂಕ್ ಖರ್ಗೆ ಉಪಾಧ್ಯಕ್ಷರಾಗಿದ್ದಾರೆ.
ಕಿಯೋನಿಕ್ಸ್ ಅಧ್ಯಕ್ಷರು, ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗಳು, ಬಿಬಿಎಂ ಮುಖ್ಯ ಆಯುಕ್ತರು, ಬೆಂಗಳೂರು ಪೊಲೀಸ್ ಆಯುಕ್ತರು, ವಿದ್ಯುನ್ಮಾನ ಮಾಹಿತಿ ತಂತ್ರಜ್ಞಾನ ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿಗಳು, ಉಪಮುಖ್ಯಮಂತ್ರಿಗಳ ಕಾರ್ಯದರ್ಶಿಗಳು ಸಮಿತಿಯ ಸದಸ್ಯರಾಗಿದ್ದಾರೆ. ಬಿಬಿಎಂಪಿ ಪ್ರಧಾನ ಅಭಿಯಂತರರು ಸದಸ್ಯ ಕಾರ್ಯದರ್ಶಿಗಳಾಗಿದ್ದಾರೆ.