ಸೆ.2ರಿಂದ ‘ಎನಿವೇರ್ ರಿಜಿಸ್ಟ್ರೇಶನ್’ ಜಾರಿ: ಆಸ್ತಿ ನೋಂದಣಿಗೆ ಜಿಲ್ಲಾ ವ್ಯಾಪ್ತಿಯ ಎಲ್ಲಾ ಉಪ ನೋಂದಣಾಧಿಕಾರಿ ಕಚೇರಿಗಳಲ್ಲಿ ಅವಕಾಶ
ಕಂದಾಯ ಸಚಿವ ಕೃಷ್ಣ ಬೈರೇಗೌಡ
ಬೆಂಗಳೂರು: ಇನ್ನೂ ಮುಂದೆ ಆಸ್ತಿ ನೋಂದಣಿಯನ್ನು ಜಿಲ್ಲಾ ವ್ಯಾಪ್ತಿಯ ಯಾವುದೇ ಉಪ ನೋಂದಣಾಧಿಕಾರಿ ಕಚೇರಿಗಳಲ್ಲಿ ಮಾಡಿಸಬಹುದು. ಸೆಪ್ಟಂಬರ್ 2ರಿಂದ ಇದು ರಾಜ್ಯಾದ್ಯಂತ ಈ ವ್ಯವಸ್ಥೆ ಜಾರಿಯಾಗಲಿದೆ
ಸುದ್ದಿಗೋಷ್ಠಿಯಲ್ಲಿ ಸೋಮವಾರ ಈ ಕುರಿತು ಮಾಹಿತಿ ನೀಡಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ, ಸೆ.2ರಿಂದ ‘ಎನಿವೇರ್ ನೋಂದಣಿ’ ವ್ಯವಸ್ಥೆಯನ್ನು ರಾಜ್ಯಾದ್ಯಂತ ವಿಸ್ತರಿಸಲಾಗುವುದು ಎಂದು ತಿಳಿಸಿದರು.
ಜಮೀನು, ನಿವೇಶನ, ಮನೆ, ವಾಣಿಜ್ಯ ಕಟ್ಟಡಗಳು ಸೇರಿದಂತೆ ಯಾವುದೇ ಆಸ್ತಿಯನ್ನು ಇದುವರೆಗೂ ಆಯಾ ತಾಲೂಕು ವ್ಯಾಪ್ತಿಯ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಮಾತ್ರ ಮಾಡಿಸಬೇಕಿತ್ತು. ಸೆ.2ರ ಬಳಿಕ ಜಿಲ್ಲಾ ವ್ಯಾಪ್ತಿಗೆ ಅವಕಾಶ ಕಲ್ಪಿಸಲಾಗುತ್ತಿದೆ. ಮುಂದೆ ರಾಜ್ಯದ ಯಾವುದೇ ಭಾಗದ ಕಚೇರಿಗೆ ತೆರಳಿ ನೋಂದಣಿ ಮಾಡಿಸುವ ವ್ಯವಸ್ಥೆ ರೂಪಿಸಲಾಗುವುದು ಎಂದರು.
ಸಮಯಕ್ಕೆ ಸರಿಯಾಗಿ ಕೆಲಸ ಆಗಲ್ಲ, ಕಾಯಬೇಕು, ಮಧ್ಯವರ್ತಿಗಳ ಕಾಟ ಇದೆ ಎಂಬ ದೂರುಗಳಿವೆ. ಇದೇ ಕಾರಣಕ್ಕೆ ‘ಎನಿವೇರ್ ನೋಂದಣಿ’ ವ್ಯವಸ್ಥೆಗೆ ಚಾಲನೆ ನೀಡಲಾಯಿತು ಎಂದು ಕೃಷ್ಣ ಬೈರೇಗೌಡ ತಿಳಿಸಿದರು.
ಆಸ್ತಿ ನೋಂದಣಿಗೆ ಮುಂದಾಗುವ ವ್ಯಕ್ತಿ ತನ್ನ ಜಿಲ್ಲೆ ವ್ಯಾಪ್ತಿಯ, ತನಗೆ ಅನುಕೂಲವಾಗುವ ಹಾಗೂ ಜನ ಸಂದಣಿ ಇಲ್ಲದ ಯಾವುದೇ ಉಪ ನೋಂದಣಿ ಕಚೇರಿಗೆ ತೆರಳಿ ಆನ್ಲೈನ್ ಮೂಲಕ ಸಮಯ ಕಾಯ್ದಿರಿಸಿ ತನ್ನ ಆಸ್ತಿ ನೋಂದಣಿ ಮಾಡಿಕೊಳ್ಳಲು ‘ಎನಿವೇರ್’ ಅಡಿಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ, ಈ ಯೋಜನೆಯನ್ನು ಫೆಬ್ರವರಿಯಿಂದಲೆ ತುಮಕೂರು ಹಾಗೂ ಬೆಳಗಾವಿಯಲ್ಲಿ ಪ್ರಾಯೋಗಿಕವಾಗಿ ಚಾಲನೆ ನೀಡಲಾಗಿತ್ತು ಎಂದು ಕಂದಾಯ ಸಚಿವರು ಹೇಳಿದರು.
ಆ ಪ್ರಯೋಗ ಯಶಸ್ವಿಯಾದ ಹಿನ್ನೆಲೆಯಲ್ಲಿ ಎನಿವೇರ್ ನೋಂದಣಿಯನ್ನು ಇದೀಗ ಎಲ್ಲ ಜಿಲ್ಲೆಯಲ್ಲೂ ವಿಸ್ತರಿಸಲು ನಿರ್ಧರಿಸಲಾಗಿದೆ. ಇದರಿಂದ ಕಚೇರಿಯಲ್ಲಿ ಜನಜಂಗುಳಿ, ಸಿಬ್ಬಂದಿಗೆ ಕೆಲಸದ ಒತ್ತಡ ಕಡಿಮೆ ಮಾಡಿ ಸುಲಲಿತವಾಗಿ ಜನರಿಗೆ ನೋದಂಣಿ ಕೆಲಸ ಆಗಲು ಈ ಯೋಜನೆ ಸಹಕಾರಿಯಾಗಲಿದೆ ಎಂದು ಅವರು ಮಾಹಿತಿ ನೀಡಿದರು.
ರಾಜ್ಯದಲ್ಲಿ 252 ಉಪ ನೋಂದಣಾಧಿಕಾರಿ(ಸಬ್ ರಿಜಿಸ್ಟ್ರಾರ್) ಕಚೇರಿಗಳಿವೆ. ಆದರೆ, ಈ ಪೈಕಿ 50 ಕಚೇರಿಗಳಲ್ಲಿ ಮಾತ್ರ ಸಿಬ್ಬಂದಿಗೆ ಹೆಚ್ಚು ಕೆಲಸದ ಒತ್ತಡ ಇದೆ. ‘ಎನಿವೇರ್ ನೋಂದಣಿ’ ವ್ಯವಸ್ಥೆಯಿಂದ ಕಾರ್ಯ ಒತ್ತಡ ಹಂಚಿಕೆಯಾಗಲಿದೆ. ಕಚೇರಿಗಳಿಗೆ ಬರುವ ಜನರಿಗೆ ಇದರಿಂದ ಅನುಕೂಲವಾಗಲಿದೆ. ಸಮಯದ ಉಳಿತಾಯದ ಜೊತೆಗೆ ಮಧ್ಯವರ್ತಿಗಳ ಕಾಟವೂ ದೂರವಾಗಲಿದೆ. ಇದೇ ಕಾರಣಕ್ಕೆ ‘ಎನಿವೇರ್ ನೋಂದಣಿ’ ವ್ಯವಸ್ಥೆಗೆ ಚಾಲನೆ ನೀಡಲಾಯಿತು ಎಂದು ಕೃಷ್ಣ ಬೈರೇಗೌಡ ತಿಳಿಸಿದರು.