ಗೃಹಜ್ಯೋತಿ ನಿಯಮದಲ್ಲಿ ಮಹತ್ವದ ಬದಲಾವಣೆ: ಇಲ್ಲಿದೆ ಮಾಹಿತಿ
ಬೆಂಗಳೂರು: ಸರಕಾರದ ಪ್ರಮುಖ ಗ್ಯಾರಂಟಿಗಳಲ್ಲಿ ಒಂದಾದ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ ಯೋಜನೆಯ ನಿಯಮದಲ್ಲಿ ಮಹತ್ವದ ಬದಲಾವಣೆಯಾಗಿದೆ. ಶೇಕಡವಾರು 10ರಷ್ಟು ಬದಲು 10 ಯುನಿಟ್ ವಿದ್ಯುತ್ ಉಚಿತ ನೀಡಲು ಸಚಿವ ಸಂಪುಟದಲ್ಲಿ ತೀರ್ಮಾನಿಸಲಾಗಿದೆ.
ಈ ಬಗ್ಗೆ ಸಂಪುಟ ಸಭೆ ಬಳಿಕ ಮಾಹಿತಿ ನೀಡಿದ ಸಚಿವ ಎಚ್.ಕೆ.ಪಾಟೀಲ್, ಗೃಹ ಜ್ಯೋತಿ ಯೋಜನೆಯಡಿಯಲ್ಲಿ 48 ಯೂನಿಟ್‍ಗಳಿಗಿಂತ ಕಡಿಮೆ ಬಳಸುವ ಗ್ರಾಹಕರಿಗೆ ಹೆಚ್ಚುವರಿ ಶೇ.10ರಷ್ಟು ಯೂನಿಟ್ ಬದಲಿಗೆ ಹೆಚ್ಚುವರಿ 10 ಯೂನಿಟ್ ಅರ್ಹತಾ ಯೂನಿಟ್‍ಗಳನ್ನು ಒದಗಿಸಲು ಸಚಿವ ಸಂಪುಟ ನಿರ್ಧರಿಸಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ 1.95 ಕೋಟಿ ಗೃಹ ಬಳಕೆ ಗ್ರಾಹಕರು ಸರಾಸರಿ 53 ಯೂನಿಟ್ ಬಳಕೆ ಮಾಡುತ್ತಿದ್ದಾರೆ. ಅದರಂತೆ ಅರ್ಹತಾ ಯೂನಿಟ್‍ಗಳು ಒಟ್ಟು 58 ಆಗಿರುತ್ತದೆ. 30 ಯೂನಿಟ್‍ಗಳನ್ನು ಬಳಸುವ ಬಡ ಕುಟುಂಬಗಳಿಗೆ ಅರ್ಹತಾ ಯೂನಿಟ್‍ಗಳು ಕೇವಲ 33 ಆಗಿರುತ್ತದೆ. ಬೆಸ್ಕಾಂ ವ್ಯಾಪ್ತಿಯಲ್ಲಿ 69.73 ಲಕ್ಷ ಕುಟುಂಬಗಳು 48 ಯೂನಿಟ್‍ಗಿಂತ ಕಡಿಮೆ ಬಳಕೆ ಮಾಡುತ್ತಿದ್ದಾರೆ. 10 ಯೂನಿಟ್‍ಗಳ ಹೆಚ್ಚಳದಿಂದ ಸರಕಾರಕ್ಕೆ 33 ಕೋಟಿ ರೂ.ಗಳ ವೆಚ್ಚ ತಗುಲಬಹುದೆಂದು ಅಂದಾಜಿಸಲಾಗಿದೆ ಎಂದು ಅವರು ಹೇಳಿದರು.