ರೈತರ ಆತ್ಮಹತ್ಯೆ ಪ್ರಕರಣಗಳಲ್ಲಿ ಪರಿಹಾರ ಪ್ರಕ್ರಿಯೆ ಶೀಘ್ರವಾಗಿ ನಡೆಯಬೇಕು: ಸಿದ್ದರಾಮಯ್ಯ
ಬೆಂಗಳೂರು: ರೈತರ ಆತ್ಮಹತ್ಯೆ ಪ್ರಕರಣಗಳಲ್ಲಿ ಪರಿಹಾರ ಪ್ರಕ್ರಿಯೆ ಶೀಘ್ರವಾಗಿ ನಡೆಯಬೇಕು. ಜತೆಗೆ, ಅವರಿಗೆ ಆತ್ಮವಿಶ್ವಾಸ ಮೂಡಿಸುವ ಕಾರ್ಯ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ.
ಸೋಮವಾರ ವಿಧಾನಸೌಧದಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ‘ರೈತರ ಆತ್ಮಹತ್ಯೆ ಪ್ರಕರಣಗಳಲ್ಲಿ ಕಾನೂನು ಪ್ರಕಾರವೇ ಉದಾರತನದಿಂದ ವರ್ತಿಸಿ ಪರಿಹಾರ ನೀಡಬೇಕು. ಜತೆಗೆ, ಸಣ್ಣ ಪುಟ್ಟ ತಾಂತ್ರಿಕ ಕಾರಣಗಳಿಗಾಗಿ ಪರಿಹಾರದ ಅರ್ಜಿಗಳನ್ನು ತಿರಸ್ಕರಿಸದೆ ಉದಾರವಾಗಿ ವರ್ತಿಸಿ ರೈತ ಕುಟುಂಬಗಳಿಗೆ ಸಹಾಯ ಮಾಡಿ’ ಎಂದು ಸೂಚಿಸಿದರು.
ಜಮೀನು ಮಾರ್ಗಸೂಚಿ ದರಕ್ಕಿಂತ ಕಡಿಮೆ ಬೆಲೆಗೆ ನೋಂದಣಿ ಅಗುತ್ತಿರುವ ಪ್ರಕರಣಗಳು ಕಂಡು ಬಂದಿದ್ದು, ಬಾಕಿ ರಾಜಸ್ವವನ್ನು ವಸೂಲು ಮಾಡಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. 30 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಈ ಪ್ರಕ್ರಿಯೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಈ ವರ್ಷದ ಮಾರ್ಚ್ ಅಂತ್ಯದ ವೇಳೆಗೆ ಇಂತಹ 24,519 ಪ್ರಕರಣಗಳು ಬಾಕಿಯಿದ್ದು, 310 ಕೋಟಿ ರೂ. ರಾಜಸ್ವ ವಸೂಲಾತಿ ಮಾಡಬೇಕಾಗಿದೆ. ಇದನ್ನು ತ್ವರಿತವಾಗಿ ಮಾಡಲು ಸೂಚನೆ ನೀಡಿದರು.
ರಾಜ್ಯದಲ್ಲಿ 92 ಉಪ ನೋಂದಣಿ ಹಾಗೂ 15 ಜಿಲ್ಲಾ ನೋಂದಣಿ ಕಚೇರಿಗಳು ಖಾಸಗಿ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇವುಗಳಿಗೆ ಸ್ವಂತ ಕಟ್ಟಡ ಒದಗಿಸಲು ಕ್ರಮ ಕೈಗೊಳ್ಳಬೇಕು. ಬೆಂಗಳೂರು ನಗರ ಪ್ರದೇಶದಲ್ಲಿ ಅತಿ ಹೆಚ್ಚು ಕಚೇರಿಗಳು ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಬಿಬಿಎಂಪಿ ಅಧೀನದ ಕಟ್ಟಡಗಳಲ್ಲಿ ಸ್ಥಳಾವಕಾಶ ಒದಗಿಸಬೇಕು ಎಂದು ಸೂಚಿಸಿದರು.
ಖಾಸಗಿ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಉಪನೋಂದಣಾಧಿಕಾರಿಗಳ ಕಚೇರಿಗಳಿಗೆ ಪ್ರತಿ ತಿಂಗಳು ಕೋಟಿಗಟ್ಟಲೆ ಬಾಡಿಗೆ ನೀಡುತ್ತಿದ್ದೇವೆ. ಇವರಿಗೆ ಸ್ವಂತ ಕಟ್ಟಡ ಕೊಡಿ. ಸ್ವಂತ ಕಟ್ಟಡದ ಅವಕಾಶ ಇಲ್ಲದಿದ್ದರೆ ಜಾಗ ನೀಡಿ ಕಟ್ಟಡ ಕಟ್ಟಿಸಿ. ಇದರಿಂದ ನಮಗೆ ವರ್ಷಕ್ಕೆ 40-50 ಕೋಟಿ ಬಾಡಿಗೆ ಹಣ ಉಳಿತಾಯವಾಗುತ್ತದೆ ಎಂದೂ ಉಲ್ಲೇಖಿಸಿದರು.
ಇನ್ನೂ, ಸಂಚಾರಿ ಕುರಿಗಾಹಿಗಳಿಗೆ ಗುರುತಿನ ಚೀಟಿ ನೀಡಬೇಕು. ಕುರಿ-ಮೇಕೆಗಳ ಟೆಂಟ್ ಹಾಕಿರುವ ಸ್ಥಳಕ್ಕೆ ಹೋಗಿ ಲಸಿಕೆ ಮತ್ತು ಚುಚ್ಚುಮದ್ದುಗಳನ್ನು ನೀಡಬೇಕು ಎಂದ ಅವರು, ಕುರಿ ಕಳ್ಳತನ ತಡೆಯಲು ಸಂಚಾರಿ ಕುರಿಗಾಹಿಗಳಿಗೆ ಬಂದೂಕು ಲೈಸೆನ್ಸ್ ಕೊಡುವುದು ಕಡ್ಡಾಯವಾಗಿದೆ. ಮಣ್ಣಿನ ಫಲವತ್ತತೆ ಕಡಿಮೆ ಆಗುತ್ತಿದೆ. ಇದನ್ನು ಹೆಚ್ಚಿಸಲು ಅಗತ್ಯ ಕ್ರಮ ಕೈಗೊಳ್ಳುವ ಜೊತೆಗೆ ರೈತರಿಗೆ ಮಣ್ಣಿನ ಆರೋಗ್ಯ ಕಾರ್ಡ್‍ನ್ನು ಕಡ್ಡಾಯವಾಗಿ ನೀಡಬೇಕು. ಪ್ರತೀ ಎರಡು ವರ್ಷಕ್ಕೊಮ್ಮೆ ಮಣ್ಣಿನ ಪರೀಕ್ಷೆ ನಡೆಸಬೇಕು. ಈ ಎಲ್ಲ ಕೆಲಸಗಳನ್ನು ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಪರಸ್ಪರ ಸಮನ್ವಯತೆಯಿಂದ ಮಾಡಬೇಕು ಎಂದು ಸೂಚಿಸಿದರು.
ಫಲಿತಾಂಶ ಕಡಿಮೆಯಾಗಬಾರದು: ‘ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಫಲಿತಾಂಶ ಕಳೆದ ವರ್ಷಕ್ಕಿಂತ ಶೇ.10ರಷ್ಟು ಕಡಿಮೆಯಾಗಿದೆ. ಪರೀಕ್ಷಾ ಅಕ್ರಮಗಳನ್ನು ನಿಯಂತ್ರಣದಲ್ಲಿಟ್ಟಿರುವುದೇ ಒಂದು ಕಾರಣವಾಗಲು ಸಾಧ್ಯವಿಲ್ಲ. ಮುಂದೆ ಹೀಗೆ ಆಗದಂತೆ ನೋಡಿಕೊಳ್ಳಬೇಕು. ಜಿಲ್ಲಾಧಿಕಾರಿಗಳು, ಸಿಇಓಗಳು, ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳದ್ದೂ ಜವಾಬ್ದಾರಿ ಇದೆ. ಒಟ್ಟಿಗೆ ಕುಳಿತು ಚರ್ಚೆ ಮಾಡಿ ಫಲಿತಾಂಶ ಹೆಚ್ಚಿಸಲು ಪ್ರಯತ್ನಿಸಬೇಕು’
ಸಿದ್ದರಾಮಯ್ಯ ಮುಖ್ಯಮಂತ್ರಿ