ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೆಸರಿನಲ್ಲಿ ಕೋಟ್ಯಂತರ ರೂ. ವಂಚನೆ: ಆರೋಪ
ಆರೋಪಿ ಪವಿತ್ರಾ
ಬೆಂಗಳೂರು/ಆನೇಕಲ್, ಫೆ.9: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಆರ್ಬಿಐ ಹೆಸರನ್ನು ಬಳಸಿಕೊಂಡು, ಹತ್ತು ಲಕ್ಷ ರೂ.ಗಳಿಗೆ ಐದು ಲಕ್ಷ ರೂ.ಸಬ್ಸಿಡಿ ನೀಡುವುದಾಗಿ ಜನರಿಗೆ ನಂಬಿಸಿ ಕೋಟ್ಯಂತರ ರೂ. ಪಡೆದು ಮಹಿಳೆಯೊಬ್ಬಳು ವಂಚಿಸಿರುವ ಆರೋಪದ ಪ್ರಕರಣ ಆನೇಕಲ್ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ.
ತಮಿಳುನಾಡಿನ ಹೊಸೂರು ಮೂಲದ ಪವಿತ್ರಾ ಎಂಬವವರು ಈ ಪ್ರಕರಣದ ಆರೋಪಿ ಎಂದು ಗುರುತಿಸಲಾಗಿದೆ.
ಬ್ಲೂ ವಿಂಗ್ಸ್ ಎಂಬ ಹೆಸರಿನ ಟ್ರಸ್ಟ್ ಮಾಡಿಕೊಂಡು ಜನರಿಗೆ ವಂಚಿಸಿರುವ ಪವಿತ್ರಾ, ಟ್ರಸ್ಟ್ಗೆ ಆರ್ಬಿಐನಿಂದ 17 ಕೋಟಿ ರೂ. ಬಂದಿರುವುದಾಗಿ ಮೊದಲು ಜನರಿಗೆ ನಂಬಿಸಿದ್ದಾಳೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಸಹಿ ಇರುವಂತೆ ನಕಲಿ ಪತ್ರ ಸೃಷ್ಟಿಸಿಕೊಂಡು ಅದನ್ನು ತೋರಿಸಿದ್ದಾಳೆ.
ಕಂತೆ ಕಂತೆ ಹಣದ ನೋಟುಗಳ ವೀಡಿಯೊಗಳನ್ನು ಕಳುಹಿಸಿ ಜನರನ್ನು ನಂಬಿಸಿ ಸುಲಭವಾಗಿ ಸಾಲ ಕೊಡುತ್ತೇನೆ. ಒಬ್ಬರಿಗೆ ಹತ್ತು ಲಕ್ಷ ರೂ. ಸಾಲ ನೀಡಿದರೆ ಅದರಲ್ಲಿ ಐದು ಲಕ್ಷ ರೂ. ಸಬ್ಸಿಡಿ ಎಂದು ಹೇಳಿದ್ದಾಳೆ. ಆದರೆ ಸಾಲ ಕೊಡುವುದಕ್ಕೂ ಮೊದಲು ಹಣ ಹೂಡಿಕೆ ಮಾಡಬೇಕು ಎಂದು ತಿಳಿಸಿದ್ದಾಳೆ ಎನ್ನಲಾಗಿದೆ.
ಪವಿತ್ರಾಳ ಮಾತನ್ನು ನಂಬಿದ ಜನರು ಒಂದು ಗುಂಪು ಮಾಡಿಕೊಂಡು ಈಕೆಗೆ ಲಕ್ಷಾಂತರ ರೂ.ಗಳನ್ನು ನೀಡಿದ್ದು, ತಿಂಗಳುಗಳು ಕಳೆದರೂ ಸಾಲ ಬಾರದೆ ಇದ್ದಾಗ ಪವಿತ್ರಾಳ ಕಳ್ಳಾಟ ಬಯಲಾಗಿದೆ. ಚಂದಾಪುರ, ಅತ್ತಿಬೆಲೆ, ಹೊಸೂರು, ಧರ್ಮಪುರಿ ಸೇರಿದಂತೆ ಹಲವು ಕಡೆಗಳಲ್ಲಿ ಪವಿತ್ರಾ ವಂಚನೆ ಮಾಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಮಾಯಸಂದ್ರದ ನಿವಾಸಿ ರತ್ನಮ್ಮ ಎಂಬವರು ಪವಿತ್ರಾ ವಿರುದ್ಧ ವಂಚನೆ ಕುರಿತು ಪ್ರಕರಣ ದಾಖಲಿಸಿದ್ದಾರೆ.
ಪ್ರಕರಣದ ಆರೋಪಿ ಪವಿತ್ರಾ ಹಾಗೂ ಆಕೆಯ ಸಹಚರರಾದ ಪ್ರವೀಣ್, ಯಲ್ಲಪ್ಪ, ಶೀಲಾ, ರುಕ್ಮಿಣಿ, ರಾಧಾ, ಮಮತಾ, ನೆಹರೂಜಿ, ಶರತ್ ಕುಮಾರ್, ಸತೀಶ್, ಮಂಜುಳಾ, ಮಾರ್ಟಿನ್, ಹೇಮಲತಾ, ಶಾಲಿನಿ ಹಾಗೂ ಇತರರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.