ಎರಡನೇ ವಾರದ ಅಧಿವೇಶನದಲ್ಲಿ ಡಿಕೆಶಿ ಪ್ರಕರಣ ವಾಪಸ್, ಝಮೀರ್ ಅಹ್ಮದ್ ಖಾನ್ ಹೇಳಿಕೆ ವಿಚಾರ ಪ್ರಸ್ತಾಪ ಸಾಧ್ಯತೆ
ಬೆಳಗಾವಿ: ಪ್ರತಿಪಕ್ಷ ಬಿಜೆಪಿಯ ಆಂತರಿಕ ಜಗಳ, ಗುಂಪುಗಾರಿಕೆಯಲ್ಲೆ ಮೊದಲ ವಾರದ ಕಲಾಪವು ಮುಗಿದಿದೆ. ಎರಡನೇ ವಾರದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರಕರಣ ವಾಪಸ್, ಝಮೀರ್ ಅಹ್ಮದ್ ಖಾನ್ ಹೇಳಿಕೆ ಸಹಿತ ಇನ್ನಿತರ ವಿಚಾರ ಪ್ರಸ್ತಾಪದ ಸಾಧ್ಯತೆಯಿದ್ದು ಚಳಿಗಾಲದ ಅಧಿವೇಶನ ಕಲಾಪ ಕಾವೇರುವ ಸಾಧ್ಯತೆಗಳಿವೆ.
ನಾಳೆ(ಡಿ.11) ಬೆಳಗ್ಗೆ 11ಗಂಟೆಗೆ ವಿಧಾನ ಮಂಡಲ ಉಭಯ ಸದನಗಳ ಕಲಾಪ ಆರಂಭಗೊಳ್ಳಲಿದ್ದು, ಮೊದಲಿಗೆ ಇತ್ತೀಚೆಗೆ ನಿಧನರಾದ ನಟಿ ಲೀಲಾವತಿ ಅವರಿಗೆ ಸಂತಾಪ ಸೂಚನೆ ಮಂಡಿಸಲಿದ್ದು, ಆ ಬಳಿಕ ಪ್ರಶ್ನೋತ್ತರ, ಶೂನ್ಯವೇಳೆ, ಬರದ ಮೇಲಿನ ಚರ್ಚೆಗೆ ಸರಕಾರದ ಉತ್ತರ, ವಿಧೇಯಕಗಳ ಚರ್ಚೆ, ಅಂಗೀಕಾರ ನಡೆಯಲಿದೆ.
ಬೆಳಗಾವಿ ಅಧಿವೇಶನದಲ್ಲಿ ಆಡಳಿತಾರೂಢ ಕಾಂಗ್ರೆಸ್ ಸರಕಾರದ ವೈಫಲ್ಯ ಎತ್ತಿ ತೋರಿಸುವ ಅತ್ಯುತ್ಸಾಹದಲ್ಲಿದ್ದ ಪ್ರತಿಪಕ್ಷ ಬಿಜೆಪಿ, ತನ್ನ ಆಂತರಿಕ ಗುಂಪುಗಾರಿಕೆಯಲ್ಲೇ ಮುಳುಗಿದ್ದು, ಪ್ರತಿಪಕ್ಷ ನಾಯಕ ಆರ್.ಅಶೋಕ್ ಮತ್ತು ಪಕ್ಷದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಮಧ್ಯೆ ಹೊಂದಾಣಿಕತೆ ಕೊರತೆ ಬಹಿರಂಗವಾಗಿದೆ.
ಮೈತ್ರಿ ಕಣ್ಮರೆ: ಪ್ರತಿಪಕ್ಷ ಬಿಜೆಪಿ-ಜೆಡಿಎಸ್ ಮೈತ್ರಿ ರಾಜ್ಯ ಸರಕಾರದ ವಿರುದ್ಧ ಮುಗಿಬೀಳುವ ನಿರೀಕ್ಷೆ ಮೂಡಿಸಿತ್ತು. ಅಧಿವೇಶನಕ್ಕೂ ಮುನ್ನ ಅಶೋಕ್, ಮಾಜಿ ಸಿಎಂಗಳಾದ ಬಸವರಾಜ ಬೊಮ್ಮಾಯಿ, ಎಚ್.ಡಿ.ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಚರ್ಚೆ ನಡೆಸಿದ್ದರು. ಆದರೆ, ಕಲಾಪದಲ್ಲಿ ಪ್ರತಿಪಕ್ಷಗಳು ಒಗ್ಗೂಡಿ ಯಾವ ವಿಚಾರವನ್ನು ಪ್ರಸ್ತಾಪಿಸಲಿಲ್ಲ.
ಅತ್ತ ಪರಿಷತ್‍ನಲ್ಲಿಯೂ ಈವರೆಗೆ ಪ್ರತಿಪಕ್ಷ ನಾಯಕನ ಆಯ್ಕೆ ಆಗಿಲ್ಲ. ಹೀಗಾಗಿ ಅಲ್ಲೂ ಬಿಜೆಪಿಗೆ ಒಗ್ಗಟ್ಟಿನ ಕೊರತೆ ಕಾಡುತ್ತಿದೆ, ಬಿಜೆಪಿಯ ಹಲವು ಸದಸ್ಯರು ಒಮ್ಮೆಗೆ ನಾನಾ ವಿಚಾರ ಪ್ರಸ್ತಾಪಿಸುವುದು, ಒಂದೇ ವಿಚಾರವಾಗಿ ಎಲ್ಲರೂ ದನಿ ಎತ್ತದ ಕಾರಣ ಸರಕಾರವನ್ನು ಅಡ್ಡ ಕತ್ತರಿಯಲ್ಲಿ ಸಿಲುಕಿಸುವ ಬದಲಿಗೇ ತಾನೇ ಸಂಕಷ್ಟ ಸಿಲುಕುವ ಸ್ಥಿತಿ ಇದೆ.
ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸೇರಿದಂತೆ ಎಂಟರಿಂದ ಹತ್ತು ಮಂದಿ ಸಚಿವರು ಅಧಿವೇಶನ ಆರಂಭಕ್ಕೂ ಮೊದಲೇ ತೆಲಂಗಾಣಕ್ಕೆ ತೆರಳಿದ್ದರು. ರಾಜ್ಯದಲ್ಲಿ ತೀವ್ರ ಬರ, ಗ್ರಾಮೀಣ ಪ್ರದೇಶದಲ್ಲಿನ ಕುಡಿಯುವ ನೀರಿನ ಸಮಸ್ಯೆ, ಬೆಳೆ ನಷ್ಟ ಪರಿಹಾರ ವಿಳಂಬ ಸಹಿತ ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಲೋಪಗಳನ್ನ ಎತ್ತಿ ತೋರಿಸುವಲ್ಲಿ ಪ್ರತಿಪಕ್ಷ ವಿಫಲವಾಗಿವೆ.
ಉಳಿದ ಇನ್ನೊಂದು ವಾರದ ಕಲಾಪದಲ್ಲಾದರೂ ಬರ ಪರಿಹಾರ ಸೇರಿದಂತೆ ರಾಜ್ಯದ ಜ್ವಲಂತ ಸಮಸ್ಯೆಗಳ ಕುರಿತು ಅರ್ಥಪೂರ್ಣ ಚರ್ಚೆ ನಡೆದು, ಅವುಗಳಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕಲಾಪ ನಡೆಯಲಿ ಎಂಬುದು ರಾಜ್ಯದ ಜನತೆಯ ನಿರೀಕ್ಷೆಯಾಗಿದೆ.